ಮೈಸೂರು

ಜಾದೂ ಮೂಲಕ ಗಮನ ಸೆಳೆದ ಕನ್ನಡ ರಾಜ್ಯೋತ್ಸವ

magic-webಮೈಸೂರಿನ ಸರಸ್ವತಿಪುರಂ ಬಡಾವಣೆಯ ನಿವಾಸಿಗಳು ಸೋಮವಾರ ಕನ್ನಡದ ಹಬ್ಬ ಆಚರಿಸಿದ್ದಾರೆ. ಇಲ್ಲಿನ ಜವರೇಗೌಡ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ 61ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಜಾದೂ ಪ್ರದರ್ಶನದ ಮೂಲಕ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಈ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ಚರ್ಚಾ ಸ್ಪರ್ಧೆ ಮತ್ತು  ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಆರಂಭಕ್ಕೂ ಮುನ್ನ ಸುಮಾ ರಾಜಕುಮಾರ್ ಜಾದೂ ಪ್ರದರ್ಶನ ನೀಡಿದ್ದು, ಪ್ರೇಕ್ಷಕರ ಮನಸೂರೆಗೊಂಡಿತು.  ಮಕ್ಕಳ ನಡುವೆಯೇ ತಾವೂ ಕೂಡ ಮಕ್ಕಳಂತೆ ವರ್ತಿಸುತ್ತ ನೆರೆದಿದ್ದ ನೂರಾರು ಮಕ್ಕಳು ಹಾಗೂ ಅವರ ಪೋಷಕರನ್ನು ನಗೆಗಡಲಲ್ಲಿ ತೇಲಿಸಿದರು. ಮಾತನಾಡುವ ಗೊಂಬೆಯೊಟ್ಟಿಗೆ ದಿನನಿತ್ಯದ ಜಂಜಾಟಗಳ ಬಗ್ಗೆ ಹಾಗೂ ನಾವು ಮಾತನಾಡುವ ಶೈಲಿಯನ್ನು ಬಳಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಶಾಸಕ ಸಾ.ರಾ ಮಹೇಶ್  ತಮ್ಮ ಹುಟ್ಟುಹಬ್ಬವನ್ನು ಮಕ್ಕಳೊಟ್ಟಿಗೆ ಕೇಕ್ ಕತ್ತರಿಸುವ ಮೂಲಕ  ಆಚಸಿಕೊಂಡು, ಸನ್ಮಾನ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು  ಕನ್ನಡದ ಉಳಿವಿಗಾಗಿ ನಾವು ಸಾಕಷ್ಟು ಹೋರಾಟ ಮಾಡಿದ್ದೇವೆ.  ವಿಧಾನಸಭೆಯಲ್ಲಿ ಕನ್ನಡ ಶಾಲೆ ಮುಚ್ಚಬಾರದೆಂದು ಹೋರಾಟ ನಡೆಸಿದ್ದೇವೆ.  ಮೇಯರ್ ಆಗಿದ್ದ ವೇಳೆ ಲಿಂಗಪ್ಪನವರು ಬಹಳ ಬಳ್ಳೆಯ ಕೆಲಸ ಮಾಡಿದ್ದಾರೆ. ಅವರ ಜೊತೆ ಸದಾ ಇರುವೆನೆಂದು ಹೇಳಿದರು. ಕಿನ್ನರಿ ಧಾರವಾಹಿಯ ಬಾಲ ನಟಿ ದಿಶಾ ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಸಂದೇಶ ನೀಡುವ ಮೂಲಕ ಎಲ್ಲರ ಗಮನ ಸೆಳೆದಳು. ಜವರೇಗೌಡ ಪಾರ್ಕ್ ನ್ನು ನಿರ್ವಹಣೆ ಮಾಡುವ ಕುಮಾರ್, ಅಂಬು, ದೇವರಾಜ್ ಹಾಗೂ ಅಶ್ವಿನಿ ನರ್ಸಿಂಗ್ ಹೋಂನ ವ್ಯವಸ್ಥಾಪಕರಾದ ಡಾ.ಪುಟ್ಟಬಸಪ್ಪ, ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಹುಮಾನ ಗೆದ್ದ ದಿಯಾ ಅರಸ್ ಇವರನ್ನು ಸನ್ಮಾನಿಸಲಾಯಿತು. ಆಂದೋಲನ ದಿನಪತ್ರಿಕೆಯ ಸಂಪಾದಕ  ರಾಜಶೇಖರ್ ಕೋಟಿ ಮಾತನಾಡಿ, ಮಗು ಸಹಜವಾಗಿ ಹುಟ್ಟಿನಿಂದ ಕಲಿಯುವ ಭಾಷೆ ಮಾತೃಭಾಷೆ. ಮಗುವಿನ ಬುದ್ದಿ ವಿಕಸನಕ್ಕೆ ಕನ್ನಡ ಭಾಷೆ ಅತ್ಯವಶ್ಯಕವಾಗಿದ್ದು, ತಾಯಂದಿರುವ ಮಕ್ಕಳಿಗೆ ಕನ್ನಡ ಕಲಿಸಬೇಕು. ಇಂಗ್ಲೀಷ್ ಬೇಡವೆಂದು ಹೇಳುತ್ತಿಲ್ಲ. ಇದರ ನಡುವೆಯೇ ಕನ್ನಡ ಮರೆಯಬಾರದು ಎಂದು ನೆರೆದಿದ್ದ ಪೋಷಕರಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಸುರೇಶ್, ಪಾಲಿಕೆ ಅಭಿವೃದ್ದಿ ಅಧಿಕಾರಿ ಗೋವಿಂದಪ್ಪ, ವಕೀಲ ಅರುಣ್ ಕುಮಾರ್, ಪಾಲಿಕೆ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಸೇರಿದಂತೆ ನೂರಾರು ಸಂಖ್ಯೆಯ ಪೋಷಕರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

comments

Related Articles

error: