ಮೈಸೂರು

ಓರ್ವ ಕಲಾವಿದನಿಗೆ ಅಭಿನಯದಲ್ಲಿ ಭದ್ರಬುನಾದಿಯನ್ನು ಹಾಕಿಕೊಡುವುದು ರಂಗಭೂಮಿ ಮಾತ್ರ : ಜಯತೀರ್ಥ ಅಭಿಮತ

ಮೈಸೂರು,ಫೆ.5:-  ಓರ್ವ ಕಲಾವಿದನಿಗೆ ಅಭಿನಯದಲ್ಲಿ  ಭದ್ರಬುನಾದಿಯನ್ನು ಹಾಕಿಕೊಡುವುದು ರಂಗಭೂಮಿ ಮಾತ್ರ ಎಂದು ಚಲನಚಿತ್ರ ಹಾಗೂ ರಂಗ ನಿರ್ದೇಶಕ ಜಯತೀರ್ಥ ಅಭಿಪ್ರಾಯಪಟ್ಟರು.

ಭಾನುವಾರ ಕಲಾಮಂದಿರದ ಮನೆಯಂಗಳದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರಂಗೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಚಲನಚಿತ್ರ ರಂಗವು ಡಿಜಿಟಲೀಕರಣಗೊಂಡಿದ್ದು, ಅದನ್ನು ಕುಳಿತಲ್ಲಿಯೇ ವೀಕ್ಷಿಸಬಹುದಾಗಿದೆ. ಆದರೆ ರಂಗಭೂಮಿಯಲ್ಲಿ ಪ್ರದರ್ಶಿತಗೊಳ್ಳುವ ನಾಟಕಗಳನ್ನು ಅವುಗಳು ನಡೆಯುವ ಸ್ಥಳಕ್ಕೆ ಹೋಗಿ ವೀಕ್ಷಿಸಬೇಕು. ಸಿನಿಮಾ ಹಾಗೂ ಟಿವಿ ಮಾಧ್ಯಮಗಳು ಸಾಕಷ್ಟು ತಂತ್ರಜ್ಞಾನ ಅಳವಡಿಸಿಕೊಂಡು ಅಭಿವೃದ್ಧಿಯತ್ತ ಸಾಗುತ್ತಿವೆ. ಆದರೇ ರಂಗಭೂಮಿ ಅವನತಿಯತ್ತ ಸಾಗುತ್ತಿದ್ದು, ಹೊಸ ವಿನ್ಯಾಸವನ್ನು ನೀಡಿದಲ್ಲಿ ಆ ರಂಗಭೂಮಿಯೂ ಕೂಡ ಚಲನಚಿತ್ರದಷ್ಟೇ ಅಭಿವೃದ್ಧಿಯನ್ನು ಸಾಧಿಸಲಿದೆ. ಒಬ್ಬ ಕಲಾವಿದನಿಗೆ ಅಭಿನಯದಲ್ಲಿ  ಭದ್ರಬುನಾದಿಯನ್ನು ಹಾಕಿಕೊಡುವುದು ರಂಗಭೂಮಿ ಮಾತ್ರ. ರಂಗಭೂಮಿಯಲ್ಲಿ ಪ್ರದರ್ಶಿಸುವ ದೃಶ್ಯಗಳು ವ್ಯಕ್ತಿಗಳಿಗೆ ಸಹನೆ, ತಾಳ್ಮೆಗಳನ್ನು ಕಲಿಸುವುದರೊಂದಿಗೆ ಉತ್ತಮ ವ್ಯಕ್ತಿಗಳಾಗಿ ಪರಿವರ್ತನೆಯಾಗುವಂತೆ ಮಾಡುತ್ತವೆ. ಅದರಂತೆ ಚಲನಚಿತ್ರ ರಂಗಕ್ಕೂ ಇದೇ ಪರಿಸ್ಥಿತಿ ಇದ್ದು, ಡಾ. ರಾಜಕುಮಾರ್ ನಟಿಸಿರುವ ಬಂಗಾರದ ಮನುಷ್ಯ ಚಲನಚಿತ್ರವನ್ನು ವೀಕ್ಷಿಸಿದ ಹಲವಾರು ಮಂದಿ ನಗರವನ್ನು ತೊರೆದು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಇದಕ್ಕೆ ಒಂದು ಉತ್ತಮ ನಿದರ್ಶನ ಎಂದು ಹೇಳಿದರು.

ನಾನು ಚಲನಚಿತ್ರ ನಿರ್ದೇಶಕನಾಗುವ ಮುನ್ನ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೆ. ಪ್ರೊ.ಜಿ.ಕೆ ಗೋವಿಂದರಾವ್, ಅಶೋಕ್ ಬಾದರದಿನ್ನಿ ಅವರ ಸಲಹೆಯಂತೆ ಚಿತ್ರರಂಗಕ್ಕೆ ಪ್ರವೇಶಿಸಿದ ನನಗೆ ಖ್ಯಾತ ನಿರ್ದೇಶಕ ದಿ.ಪುಟ್ಟಣ್ಣ ಕಣಗಾಲ್ ಹಾಗೂ ಗಿರೀಶ್ ಕಾರ್ನಾಡ್ ರವರು ನಿರ್ಮಿಸಿದ ಚಲನಚಿತ್ರಗಳಿಂದ ಮನಸ್ಸು ಪರಿವರ್ತನೆಗೊಂಡು ಇಂದು ಈ ಸ್ಥಾನವನ್ನು ಅಲಂಕರಿಸಿರುವುದು ಹೆಮ್ಮೆಯಾಗಿದೆ ಎಂದರು.

ಚಲನಚಿತ್ರ ಹಾಗೂ ರಂಗಭೂಮಿ ನಡುವೆ ಹೆಚ್ಚಿನ ಬಾಂಧವ್ಯ ಬೆಳೆಸಲು ಇಂದು ಆಯೋಜಿಸಿರುವ ಕಾರ್ಯಕ್ರಮವು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿಗಳಾದ ರಾಜಶೇಖರ ಕದಂಬ, ರಾಮೇಶ್ವರಿ ವರ್ಮ, ಮಂಡ್ಯ ರಮೇಶ್ , ಅಭಿಯಂತರರು ಸಂಸ್ಥೆಯ ಅಧ್ಯಕ್ಷ ಸುರೇಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: