ಕರ್ನಾಟಕಪ್ರಮುಖ ಸುದ್ದಿ

ಮೊದಲ ಅಧಿವೇಶನದಲ್ಲಿ ಮಹಾದಾಯಿ ಸಮಸ್ಯೆ ಕುರಿತು ಪ್ರಸ್ತಾಪಿಸಿದ ರಾಜ್ಯಪಾಲರು

ಬೆಂಗಳೂರು,ಫೆ.5-ವಿಧಾನ ಮಂಡಲದ ಪ್ರಸಕ್ತ ಸಾಲಿನ ಮೊದಲ ಅಧಿವೇಶನ ಸೋಮವಾರ ಆರಂಭವಾಗಿದ್ದು, ರಾಜ್ಯಪಾಲ ವಜುಭಾಯ್ ರೂಢಬಾಯ್ ವಾಲಾ ಅವರು ಉಭಯ ಸದನಗಳನ್ನು ಉದ್ದೇಶಿಸಿ ಮಹಾದಾಯಿ ಸಮಸ್ಯೆ ಕುರಿತು ಮಾತನಾಡಿದ್ದಾರೆ.

ನೀರಿನ ವಿಚಾರದಲ್ಲಿ ಸರ್ಕಾರ ತನ್ನ ಬದ್ಧತೆ ತೋರಿಸಿದ್ದು, ನಮ್ಮ ಹಕ್ಕಿಗಾಗಿ ರಾಜ್ಯ ಸರ್ಕಾರ ಹೋರಾಟ ಮುಂದುವರಿಸಿದೆ. ಮಹದಾಯಿ ನೀರಿಗಾಗಿ ಸರ್ಕಾರ ತನ್ನ ಪ್ರಾಮಾಣಿಕ ಪ್ರಯತ್ನ ಮುಂದುವರೆಸಿದ್ದು, ನಮ್ಮ ಹಕ್ಕು ಸಾಧನೆಗಾಗಿ ನಮ್ಮ ಪ್ರಯತ್ನ ಮುಂದುವರೆಯಲಿದೆ. ಕಾವೇರಿ. ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿನ ನೀರಿನ ಬೇಡಿಕೆಯನ್ನು ಪೂರ್ಣಗೊಳಿಸಿದ್ದೇವೆ ಎಂದಿದ್ದಾರೆ.

ಸರ್ಕಾರ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರಮುಖವಾಗಿ ಹಸಿವು ಮುಕ್ತ ರಾಜ್ಯಕ್ಕಾಗಿ ಇಂದಿರಾ ಕ್ಯಾಂಟೀನ್, ಅನ್ನಭಾಗ್ಯದಂತಹ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ರೈತರ ಸಾಲಮನ್ನಾ ನಿರ್ಧಾರ ಸರ್ಕಾರದ ಮಹತ್ವದ ನಿರ್ಧಾರಗಳಲ್ಲಿ ಒಂದಾಗಿದ್ದು, ರೈತರಿಗಾಗಿ ಸಹಕಾರಿ ಸಂಸ್ಥೆಗಳ ಮೂಲಕ ಸಾಲ ನೀಡಲಾಗುತ್ತಿದೆ. ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ರಾಜ್ಯದ ಲಕ್ಷಾಂತರ ರೈತರು ಫಲಾನುಭವಿಗಳಾಗಿದ್ದು, ವಿವಿಧ ಬಗೆಯ ಸವಲತ್ತು ಪಡೆಯುತ್ತಿದ್ದಾರೆ ಎಂದು ಹೇಳಿದರು.

ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಎಲ್ಲ ವರ್ಗಕ್ಕಾಗಿ ಸಾಮಾಜಿಕ ನ್ಯಾಯ ನೀಡಲು ಕ್ರಮ ಕೈಗೊಂಡಿದ್ದೇವೆ. ಬಡವರು, ದುರ್ಬಲರು, ಮಧ್ಯಮವರ್ಗದ ಕಲ್ಯಾಣಕ್ಕೆ ಸರ್ಕಾರ ಕಟಿಬದ್ಧವಾಗಿದ್ದು, ಆರ್ಥಿಕ ಅಭಿವೃದ್ಧಿ ಸಾಧಿಸುವಲ್ಲಿ ಸರ್ಕಾರ ಯಶಸ್ವಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಯೂ ರಾಜ್ಯ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದ್ದು, ಕೋಮು ಸೌಹಾರ್ಧ ಸಭೆಗಳನ್ನು ನಡೆಸುತ್ತಿದೆ ಎಂದರು.

ಹುಬ್ಬಳ್ಳಿ-ಧಾರವಾಡದಲ್ಲಿ ಮಾರ್ಚ್ ವೇಳೆಗೆ ತ್ವರಿತ ಬಸ್ ಸಾರಿಗೆ ವ್ಯವಸ್ಥೆಯನ್ನು ಆರಂಭಿಸುವುದಾಗಿ ಹೇಳಿದ ರಾಜ್ಯಪಾಲರು, ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ನಗರೋತ್ಥಾನ 2 ಮತ್ತು 3ನೇ ಹಂತದ ಯೋಜನೆಗಳಲ್ಲಿ 6,479 ಕೋಟಿ ರೂ. ವೆಚ್ಚದ 7382 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದಿದ್ದಾರೆ.

ಕಲಬುರ್ಗಿ ವಿಮಾನ ನಿಲ್ದಾಣದ ಕಾಮಗಾರಿಯನ್ನು ಮಾರ್ಚ್ ವೇಳೆಗೆ ಹಾಗೂ ಪ್ರಾದೇಶಿಕ ವಿಮಾನ ನಿಲ್ದಾಣಗಳ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಲಾಗುವುದು. ರೈಲ್ವೆ ಮಂತ್ರಾಲಯದಿಂದ ವೆಚ್ಚ ಹಂಚಿಕೆ ಆಧಾರದ ಮೇಲೆ 12 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರಲ್ಲಿ ಹಾಸನ- ಬೆಂಗಳೂರು ಹೊಸ ಮಾರ್ಗ, ಯಾದಗಿರಿ ಕೋಚ್ ಕಾರ್ಖಾನೆ, ಬೀದರ್-ಕಲಬುರ್ಗಿ ಹೊಸ ರೈಲು ಸ್ಥಾಪನೆ ಯೋಜನೆಯೂ ಇದೆ ಎಂದರು.

ರಾಜ್ಯದಲ್ಲಿ ರಸ್ತೆ ಜಾಲವನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದ್ದು, ನಾಲ್ಕು ವರ್ಷದಲ್ಲಿ 8190ಕೋಟಿ ರೂ. ವೆಚ್ಚದಲ್ಲಿ 80,644 ಕಿ.ಮೀ. ಹೆದ್ದಾರಿ ಅಭಿವೃದ್ಧಿ ಮಾಡಲಾಗಿದೆ. 20733ಕಿ.ಮೀ ಜಿಲ್ಲಾ ರಸ್ತೆಗಳನ್ನು, 1854ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲಾಗಿದೆ. 6433ಕಿ.ಮೀ. ರಸ್ತೆ ಮೇಲ್ದರ್ಜೆಗೆ ಕೇಂದ್ರ ಸರ್ಕಾರದಿಂದ ತಾತ್ವಿಕ ಅನುಮೋದನೆ ಪಡೆಯಲಾಗಿದೆ. ಇದರಿಂದ ರಾಜ್ಯ ಹೆದ್ದಾರಿ ಉದ್ದ 8287ಕಿ.ಮೀ. ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ ಎಂದು ಹೇಳಿದರು. (ವರದಿ-ಎಂ.ಎನ್)

Leave a Reply

comments

Related Articles

error: