ಮೈಸೂರು

ಕ್ಯಾನ್ಸರ್ ಗೆದ್ದ ಜೀವನ ಪ್ರೇಮಿ ಕೃತಿ ಲೋಕಾರ್ಪಣೆ: ಜೀವನದಲ್ಲಿ ಆತ್ಮವಿಶ್ವಾಸ ಅಳವಡಿಸಿಕೊಂಡರೆ ರೋಗಗಳನ್ನು ನಿಯಂತ್ರಿಸಬಹುದು; ಮಹೇಶಾತ್ಮಾನಂದ ಜೀ

ಮೈಸೂರು, ಫೆ.5- ಜೀವನದಲ್ಲಿ ಆತ್ಮವಿಶ್ವಾಸ, ಧೈರ್ಯ ಅಳವಡಿಸಿಕೊಂಡರೆ ಎಂತಹ ಭಯಾನಕ ರೋಗಗಳನ್ನು ಕೂಡ ನಿಯಂತ್ರಿಸಬಹುದು ಎಂದು ರಾಮಕೃಷ್ಣ ಆಶ್ರಮದ ಮಹೇಶಾತ್ಮಾನಂದ ಜೀ ಅಭಿಪ್ರಾಯಪಟ್ಟರು.

ಸೋಮವಾರ  ಅಮೃತ ಮಹೋತ್ಸವ ಭವನದಲ್ಲಿ ಸಂಜೀವಿನಿ ಸಮಾನ ಮನಸ್ಕರ ವೇದಿಕೆ ವತಿಯಿಂದ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಮೇಶ್ ಬಿಳಿಕೆರೆ ಅವರ ಕ್ಯಾನ್ಸರ್ ಗೆದ್ದ ಜೀವನ ಪ್ರೇಮ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಒಳ್ಳೆಯ ಮಾತು, ಪ್ರೀತಿ ವಿಶ್ವಾಸದ ನಡೆಯಿಂದ ರೋಗಿಗಳ ಮನಸ್ಸನ್ನು ಪರಿವರ್ತಿಸಬಹುದು. ಕ್ಯಾನ್ಸರ್ ಎಂದರೆ ಜೀವನವೇ ಕ್ಯಾನ್ಸಲ್ ಎಂಬ ಭಾವನೆ ಸಮಾಜದಲ್ಲಿ ಮನೆ ಮಾತಾಗಿದೆ. ಈ ಭಾವನೆ ಸಲ್ಲದು. ಯಾವುದೇ ಕಾಯಿಲೆಗಳನ್ನು ಔಷಧಿಗಳಿಂದ ಗುಣಪಡಿಸಬಹುದಾದರೂ ಆತ್ಮವಿಶ್ವಾಸ ಬಹಳ ಮುಖ್ಯ. ರೋಗದ ಬಗ್ಗೆ ಭಯ ಪಟ್ಟರೆ ಆತ್ಮವಿಶ್ವಾಸ ಕಳೆದುಕೊಂಡು ಬೇಗ ಸಾವಿನ ದವಡೆಗೆ ತುತ್ತಾಗುತ್ತಾರೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಆತ್ಮವಿಶ್ವಾಸ, ಧೈರ್ಯ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸ್ವಚ್ಛ ಹಾಗೂ ಗುಣ ಮಟ್ಟದ ಆಹಾರ ಸೇವನೆ ಔಷಧಿಗಿಂತಲೂ ಮಿಗಿಲಾದದ್ದು. ನಮ್ಮ ಸುತ್ತ ಮುತ್ತಲಿನ ವಾತಾವರಣವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳುವುದಲ್ಲದೇ ಪ್ರಕೃತಿಯನ್ನು ಪೋಷಿಸಿ ಬೆಳೆಸಬೇಕು. ಒಳ್ಳೆಯ ಮರ ಗಿಡಗಳಿರುವ ಪ್ರಶಾಂತ ವಾತಾವರಣದಲ್ಲಿ ರೋಗ ರುಜಿನಗಳು ನುಸುಳುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆ ಬದಿಯಲ್ಲಿದ್ದ ಮರಗಿಡಗಳನ್ನು ಕಡಿದು ಹಾಕಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಪ್ರಕೃತಿಯನ್ನು ನಿರ್ಲಕ್ಷಿಸಿದರೆ ರೋಗಗಳಿಗೆ ತುತ್ತಾಗುವುದು ಸತ್ಯ. ಆಗಾಗಿ ಪ್ರಕೃತಿಯನ್ನು ತನ್ನ ಮಗುವಿನಂತೆ ಪ್ರೀತಿಸಿ ಎಂದು ಹೇಳಿದರು.

ಯಾವುದೇ ರೋಗಗಳನ್ನು ಗುಣಪಡಿಸಲಾಗದು ಎಂಬ ಭಾವನೆ ಸಲ್ಲದು. ಸಕಾರಾತ್ಮಕ ಭಾವನೆ, ಒಳ್ಳೆಯ ಚಿಂತನೆ ಬೆಳೆಸಿಕೊಂಡರೆ ರೋಗಗಳು ತಗಲುವ ಸಾಧ್ಯತೆ ಕಡಿಮೆ. ಕ್ಯಾನ್ಸರ್ ಬಂದರೆ ಶೇ.80 ರಷ್ಟು ಜೀವನ ಹಾಳು ಎಂಬ ಭಾವನೆ ಮನಸ್ಸಿನಿಂದ ತೊಡೆದು ಹಾಕಿ. ಒಳ್ಳೆಯ ಮಾತಿನಿಂದ ಕಾಯಿಲೆಗಳನ್ನು ಅರ್ಧದಷ್ಟು ಕಡಿಮೆ ಮಾಡಬಹುದು. ವೈದ್ಯರು ರೋಗಿಗಳೊಂದಿಗೆ ಪ್ರೀತಿ, ಸಂಯಮದಿಂದ ವರ್ತಿಸಿದರೆ ರೋಗಗಳು ತಾನಾಗಿಯೇ ನಿಯಂತ್ರಣಕ್ಕೆ ಬರುತ್ತವೆ. ಆದರೇ ಇತ್ತೀಚಿನ ವೈದ್ಯರು ನಿರ್ಲಕ್ಷ್ಯ ಮನೋಭಾವದ ಪ್ರವೃತ್ತಿಯಿಂದ ವರ್ತಿಸುತ್ತಿರುವುದನ್ನು ಕಾಣಬಹುದಾಗಿದೆ. ಸೇವೆ ಎಂಬ ಕ್ಷೇತ್ರ ಈಗ ಹಣ ಮಾಡುವ ದಂಧೆಯಾಗಿ ಪರಿವರ್ತನೆಯಾಗಿರುವುದು ಶೋಚನೀಯ ಎಂದರು.

ಈ ಸಂದರ್ಭದಲ್ಲಿ ಪ್ರೊ.ಮಲೆಯೂರು ಗುರುಸ್ವಾಮಿ ಮಾತನಾಡಿ ಸಾವಿನ ನಿರೀಕ್ಷೆ ರೋಗಿಗಳಿಗೆ ಬಂದರೆ ಮಾನಸಿಕ ತೊಳಲಾಟ ಹೆಚ್ಚಾಗುತ್ತದೆ. ಎಲ್ಲವನ್ನು ಆತ್ಮಸ್ಥೈರ್ಯದಿಂದ ಎದುರಿಸಬೇಕು. ಮೌಢ್ಯಗಳಿಂದ ದೂರವಾಗಿ ಜೀವನ ಕ್ರಮವನ್ನು ಸರಿಯಾದ ದಾರಿಯಲ್ಲಿ ರೂಪಿಸಿಕೊಂಡರೆ ಆರೋಗ್ಯವಂತ ಜೀವನ ಸಾಗಿಸಬಹುದು. ಭಯಾನಕ ಕ್ಯಾನ್ಸರ್ ರೋಗವನ್ನು ಆತ್ಮವಿಶ್ವಾಸದಿಂದ ಎದುರಿಸಿ ಸಂಪೂರ್ಣವಾಗಿ ಗುಣಮುಖರಾಗಿರುವ ರಮೇಶ್ ಬಿಳಿಕೆರೆಯವರು ಸಮಾಜಕ್ಕೆ ಪುಸ್ತಕದ ಮೂಲಕ ಒಳ್ಳೆ ಸಂದೇಶ ನೀಡಿದ್ದಾರೆ. ಪ್ರತಿಯೊಬ್ಬರು ಜೀವನವನ್ನು ಪ್ರೀತಿಸಿ ಆನಂದದ ಜೀವನವನ್ನು ಸಾಗಿಸಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ವಿಶ್ವೇಶ್ವರ, ಡಾ.ರಾಘವೇಂದ್ರ ಪೈ, ಪತ್ರಕರ್ತ ಅಂಶಿ ಪ್ರಸನ್ನ, ಡಾ.ಚಂದ್ರಶೇಖರ್, ಮಾಜಿ ಶಾಸಕ ಸತ್ಯಪ್ಪ, ಎಂ.ಡಿ.ಸಿ.ಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಸವೇಗೌಡ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: