ಮೈಸೂರು

ವಚನಗಳ ಮೂಲಕ ಉತ್ತಮ ಸಮಾಜ ನಿರ್ಮಾಣ : ಹೆಚ್.ಎ.ವೆಂಕಟೇಶ್

ಮೈಸೂರು ಫೆ.6:- ಸಮಾಜದಲ್ಲಿ ತಾಂಡವಾಡುತ್ತಿದ್ದ ಮೌಢ್ಯತೆ, ಶೋಷಣೆ, ಜಾತೀಯತೆ, ಅನಿಷ್ಟ ಪದ್ಧತಿಗಳನ್ನು ವಚನಗಳ ಮೂಲಕ ಹೋಗಲಾಡಿಸಿ ಉತ್ತಮ ಸಮಾಜ ನಿರ್ಮಾಣ ಮಾಡಿದವರಲ್ಲಿ  ಅಂಬಿಗರ ಚೌಡಯ್ಯ ಒಬ್ಬರಾಗಿದ್ದಾರೆ ಎಂದು ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಹೆಚ್.ಎ.ವೆಂಕಟೇಶ್ ತಿಳಿಸಿದರು.
ಸೋಮವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತ್ಯೋತ್ಸವದಲ್ಲಿ ಮಾತನಾಡಿದರು.  ಉತ್ತಮ ಸಮಾಜ ನಿರ್ಮಾಣದಲ್ಲಿ ಚೌಡಯ್ಯ ಅವರ ಪಾತ್ರ ಬಹಳ ಮುಖ್ಯವಾಗಿದೆ. ಜಾತಿ ಭೇದ ಮರೆತು ಜಾತೀಯತೆಯನ್ನು ಹೋಗಲಾಡಿಸಿದವರು. ವೃತ್ತಿಗೆ ಹೆಚ್ಚು ಗೌರವ ನೀಡಿ ತಮ್ಮ ವೃತ್ತಿ ಅಂಬಿಗವನ್ನು ಹೆಸರಿನಲ್ಲೇ ಉಳಿಸಿಕೊಂಡವರು, ಕೀಳರಿಮೆಯ ವಿರುದ್ಧ ಹೋರಾಡಿದವರು ಅಂಬಿಗರ ಚೌಡಯ್ಯ ಎಂದರು.
ಹುಟ್ಟಿದಾಗ ಉಸಿರು ಇರುತ್ತದೆ ಆದರೆ ಹೆಸರು ಇರುವುದಿಲ್ಲ, ಸತ್ತಾಗ ಉಸಿರಿರುವುದಿಲ್ಲ ಹೆಸರಿರುತ್ತದೆ. ಅಂತಹ ಹೆಸರುಳಿಸಿಕೊಂಡವರಲ್ಲಿ ಅಂಬಿಗರ ಚೌಡಯ್ಯ ಕೂಡ ಒಬ್ಬರು. ಕಂದಚಾರಗಳಿಂದ ಮುಕ್ತರಾಗಲು ಸಮಾಜವನ್ನು ತಮ್ಮ ವಚನಗಳ ಮೂಲಕ ಬಡಿದೆಬ್ಬಿಸಿದವರು ಇವರು ಎಂದರು.
ಶೋಷಿತ ಸಮುದಾಯಗಳಲ್ಲಿ ಇಂದಿಗೂ ಮೌಢ್ಯತೆ, ಜಾತೀಯತೆ, ಅಸಮಾನತೆ ಇದೆ. ಅದರಿಂದ ಮುಕ್ತರಾಗಬೇಕು, ಯುವಜನರು ಎಚ್ಚೆತ್ತುಕೊಳ್ಳಬೇಕು, ಉತ್ತಮ ಸಮಾಜದ  ಸೃಷ್ಟಿಕರ್ತರಾಗಬೇಕು. ಅರಸ ಎಂದರೆ ದೊಡ್ಡವನಲ್ಲ, ಉಳಿದವರು ಕೀಳಲ್ಲ, ಅವರು ಮಾಡುವ ವೃತ್ತಿ ಶ್ರೇಷ್ಠ ಎಂದು ತೋರಿದವರು ಅಂಬಿಗರ ಚೌಡಯ್ಯ ಎಂದರು.  ನಿರ್ಭಯ, ನಿರ್ದಾಕ್ಷಿಣ್ಯವಾಗಿ ಸಮಾಜದ ಅಂಧಕಾರಗಳ ವಿರುದ್ಧ ಧ್ವನಿ ಎತ್ತಿ ತಾರತಮ್ಯಗಳನ್ನು ಹೋಗಲಾಡಿಸಿದವರು. ಸ್ವಾರ್ಥ ಎಂಬುದು ಯಾರನ್ನು ಬಿಗಿಯಾಗಿ ಹಿಡಿದಿದಿಯೋ ಅವರೇ ರೂಪುಗೇಡಿಗಳು, ಅವರ ಕೆಲಸದಲ್ಲಿ ಯಾರು ತಮ್ಮನ್ನು ತಾವು ತೊಡಗಿಸಿಕೊಂಡು ವೃತ್ತಿಗೌರವ ತೋರುವರೋ ಅವರೆ ಅಂದ-ಚೆಂದವಂತರು ಎಂದು ಚೌಡಯ್ಯ ಸಮಾಜಕ್ಕೆ ತಿಳಿಸಿಕೊಟ್ಟರು ಎಂದರು.
ಧೈರ್ಯ, ನಂಬಿಕೆ, ಪ್ರಾಮಾಣಿಕತೆ ಬಗ್ಗೆ ಎಲ್ಲರೂ ನಂಬಿಕೆ ಇಡಬೇಕು. ಹಿಂದುಳಿದ ವರ್ಗಗಳು ಎಚ್ಚೆತ್ತುಕೊಳ್ಳಬೇಕು, ಶಿಕ್ಷಣಕ್ಕೆ ಮಹತ್ವ ನೀಡಬೇಕು. ದೇವಾಲಯಗಳಿಗಿಂತ ಒಂದು ಶಾಲೆ, ಶಿಕ್ಷಣ ಸಂಸ್ಥೆ ಶ್ರೇಷ್ಠ. ಮಕ್ಕಳನ್ನು ಉತ್ತಮ ನಾಯಕರನ್ನಾಗಿ ಮಾಡಬೇಕು ಎಂದು ತಳಿಸಿದರು.
ಮಹಾರಾಣಿ ಕಲಾ ಕಾಲೇಜಿನ ಇತಿಹಾಸ ಸಹ ಪ್ರಾಧ್ಯಾಪಕ ಡಾ.ಕೆ.ಎಸ್.ರಾಮ್‍ಪ್ರಸಾದ್ ಮಾತನಾಡಿ ದಲಿತ್ತೋದ್ಧಾರಕ್ಕೆ ಬಸವೇಶ್ವರ, ಸ್ವಾತಂತ್ರ್ಯಕ್ಕೆ ಗಾಂಧಿಜೀ, ಸಂಪ್ರದಾಯಕ್ಕೆ ಶರಣರು ಎಂಬಂತೆ ಮೌಢ್ಯತೆಯನ್ನು ಹೊಗಲಾಡಿಸುವಲ್ಲಿ ನಿಜಗುಣ ಅಂಬಿಗರ ಚೌಡಯ್ಯ ಪಾತ್ರ ಮಹತ್ವದ್ದು ಎಂದರು. ಸತ್ಕಾರ್ಯವನ್ನು ಮಾಡುವವರು ಮಾತ್ರ ತೃಪ್ತಿ, ನೆಮ್ಮದಿ ಹೊಂದಲು ಸಾಧ್ಯ ಎಂದು ಚೌಡಯ್ಯ ತಮ್ಮ ವಚನಗಳಲ್ಲಿ ಬಿಂಬಿಸಿದ್ದಾರೆ. ಸಂಸ್ಕೃತ ಭಾಷೆಯನ್ನು ಬದಿಗೊತ್ತಿ ಶುದ್ಧವಾದ, ಆಡುಭಾಷೆ ಕನ್ನಡದಲ್ಲಿ ತಮ್ಮ ವಚನಗಳನ್ನು ರಚಿಸಿದವರು ಚೌಡಯ್ಯ ಎಂದು ತಿಳಿಸಿದರು.
ಸಮಾಜಕ್ಕೆ ಸರಳತೆ, ಶಾಂತಿಯನ್ನು ತಮ್ಮ ಒರಟುತನದಿಂದಲೇ ತೋರಿಸಿಕೊಟ್ಟರು. ನೇರನುಡಿ ಯಾವಾಗಲೂ ಒರಟಾಗಿರುತ್ತದೆ.  ಒಗ್ಗಟ್ಟನ್ನು ಸೃಷ್ಟಿಸಿಕೊಂಡು ಸಂಘಟನೆಗೊಂಡಾಗ ಮಾತ್ರ ಹಿಂದುಳಿದ ವರ್ಗಗಳು ಮೇಲೆ ಬರಲು ಸಾಧ್ಯ ಎಂದು ತಿಳಿಸಿದರು.
ಸಭೆಯಲ್ಲಿ ಮೈಸೂರು ಮಹಾಪೌರರಾದ ಟಿ.ಭಾಗ್ಯವತಿ, ಉಪಮಹಾಪೌರರಾದ ಇಂದಿರಾ, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧ್ಯಕ್ಷ ವೈ.ಡಿ.ರಾಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ, ಅಂಬಿಗರ ಚೌಡಯ್ಯ ಸಮುದಾಯದ ಕಾರ್ಯದರ್ಶಿಯಾದ ವಸಂತಮ್ಮ, ಮೈಸೂರು ಜಿಲ್ಲಾ ಗಂಗಾಮತಸ್ಥರ ಅಧ್ಯಕ್ಷ ಶ್ರೀನಿವಾಸ್, ಕೊಪ್ಪಳದ ಗಂಗಾಮತಸ್ಥರ ಅಧ್ಯಕ್ಷ ಬೋಗೇಶ್, ಮೂಡ ಸದಸ್ಯರಾದ ಶಿವಮಲ್ಲು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: