ಮೈಸೂರು

ನಂಜನಗೂಡಿನ ಕಪಿಲಾ ನದಿಯಲ್ಲಿ ನಡೆಯುತ್ತಿದೇ ಸ್ವಚ್ಛತಾ ಕಾರ್ಯ

ಮೈಸೂರು,ಫೆ.6:- ನಂಜನಗೂಡಿನ ಕಪಿಲಾ ನದಿ ಸ್ವಚ್ಛತೆ ಕಾರ್ಯ ಇಂದು ಆರಂಭಗೊಂಡಿದ್ದು, ನದಿಯಲ್ಲಿ ಬಿದ್ದಿದ್ದ ಬಟ್ಟೆ, ಪ್ಲಾಸ್ಟಿಕ್ ಕವರ್, ಜೊಂಡು ಮತ್ತು ಬದಿಯನ್ನು ತೆಗೆದು  ಸ್ವಚ್ಛಗೊಳಿಸಲಾಗುತ್ತಿದೆ.

ಶ್ರೀಕಂಠೇಶ್ವರ ದೊಡ್ಡಜಾತ್ರೆಗೆ ದಿನಗಣನೆ ನಡೆಯುತ್ತಿದೆ. ನದಿಯಲ್ಲಿ ಭಕ್ತಾದಿಗಳು ಬಿಟ್ಟು ಹೋದ ಬಟ್ಟೆ, ಪ್ಲಾಸ್ಟಿಕ್ ಕವರ್, ಜೊಂಡು ತುಂಬಿಕೊಂಡು ಕಪಿಲಾ ನದಿಯು ಗಬ್ಬುನಾರುತ್ತಿತ್ತು. ದೊಡ್ಡಜಾತ್ರೆಗೆ ಲಕ್ಷಾಂತರ ಭಕ್ತರು ಬರುವ ಹಿನ್ನೆಲೆಯಲ್ಲಿ ಬಂದಂತಹ ಭಕ್ತರಿಗೆ ಕಪಿಲಾ ನದಿಯಲ್ಲಿ ಮಿಂದು ತಮ್ಮ ಹರಕೆಗಳನ್ನು ತೀರಿಸಿ ದೇವರ ದರ್ಶನ ಪಡೆಯಲು ಅನುಕೂಲವಾಗುವಂತೆ ಇಂದಿನಿಂದ ಸಂಬಂಧಪಟ್ಟ ಅಧಿಕಾರಿಗಳು ಜೆ.ಸಿ.ಬಿ. ಮುಖಾಂತರ ಕಪಿಲಾ ನದಿ ಸ್ವಚ್ಛಗೊಳಿಸಲು ಕ್ರಮಕೈಗೊಂಡಿದ್ದಾರೆ. ದಕ್ಷಿಣ ಕಾಶಿಯೆಂದೇ ಪ್ರಸಿದ್ಧವಾದ ನಂಜನಗೂಡಿನ ಶ್ರೀಕಂಠೇಶ್ವರ ದರ್ಶನಕ್ಕೆ ದಿನನಿತ್ಯ ಸಹಸ್ರಾರು ಮಂದಿ ಭಕ್ತರು ಬರುವುದಲ್ಲದೇ ಜಾತ್ರೆ ಹಾಗೂ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸಿ ಕಪಿಲ ನದಿಯಲ್ಲಿ ಮಿಂದು ಸ್ವಾಮಿಯ ದರ್ಶನ ಪಡೆಯುತ್ತಾರೆ. ಆದರೇ ಕಪಿಲ ನದಿಯಲ್ಲಿ ಸ್ನಾನ ಮಾಡುವಾಗ ಬಟ್ಟೆ, ಪ್ಲಾಸ್ಟಿಕ್ ಕವರ್, ಇನ್ನಿತರೇ ವಸ್ತುಗಳನ್ನು ಅಲ್ಲಿಯೇ ಬಿಟ್ಟು ದರ್ಶನಕ್ಕೆ ತೆರಳುತ್ತಾರೆ. ಇದರಿಂದ ನೀರು ಕಲುಷಿತಗೊಂಡು ಗಬ್ಬು ವಾಸನೆ ಬರುತ್ತಿತ್ತು. ಹಲವು ಮಂದಿ ಭಕ್ತಾದಿಗಳು ಈ ನೀರಿನಲ್ಲಿ ಸ್ನಾನ ಮಾಡಲು ಹಿಂಜರಿಯುತ್ತಿದ್ದರು.

ಭಕ್ತಾದಿಗಳು ಕಪಿಲ ನದಿಯ ಸ್ವಚ್ಛತೆಗಾಗಿ ಶಾಸಕರು, ಸಚಿವರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಜಾಣಕುರುಡರಾಗಿ ವರ್ತಿಸಿದ್ದರು. ಭಕ್ತರ ಪ್ರತಿಭಟನೆ ಹೆಚ್ಚಾದಾಗ ಸ್ವಚ್ಛತೆ ಕಾರ್ಯಕ್ಕೆ ಮುಂದಾಗಿದ್ದಾರೆ.  ಶ್ರೀಕಂಠೇಶ್ವರ ಸ್ವಾಮಿಯ ದೊಡ್ಡ ಜಾತ್ರೆ ಸಮೀಪಿಸುತ್ತಿರುವುದರಿಂದ  ಲಕ್ಷಾಂತರ ಭಕ್ತರು ಆಗಮಿಸುವುದು ಸಹಜ. ಭಕ್ತರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಈಗಾಗಲೇ ಸ್ವಚ್ಛತೆ ನಡೆಸುತ್ತಿದ್ದಾರೆ.  ಈ ಸ್ವಚ್ಛತಾ ಕಾರ್ಯ ನಿರಂತರವಾಗಿರಲಿ ಎಂಬುದೇ ಭಕ್ತಾದಿಗಳ ಆಶಯವಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: