ಮೈಸೂರು

ದುರ್ಬಲ ವರ್ಗಗಳ ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮ

ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಮಂಗಳವಾರದಂದು ರಾಷ್ಟ್ರೀಯ ಐಕ್ಯತಾ ಸಪ್ತಾಹ ಅಂಗವಾಗಿ ದುರ್ಬಲ ವರ್ಗಗಳ ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಪುಟ್ಟರಾಜು ‘ದುರ್ಬಲ ವರ್ಗಗಳ ಅಭಿವೃದ್ಧಿಗಾಗಿ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳು’ ಎಂಬ ವಿಷಯದ ಕುರಿತಾಗಿ ಮಾತನಾಡಿದರು.

ರಾಜ್ಯದಲ್ಲಿ 2014-15 ರಲ್ಲಿ ಜಾತಿ ಗಣತಿ ನಡೆಯಿತು. ಸುಮಾರು 85 ವರ್ಷಗಳ ಬಳಿಕ ರಾಜ್ಯ ಸರ್ಕಾರ ಈ ಹೊಸ ಸಮೀಕ್ಷೆ ನಡೆಸಿತು. ಇದು ಇಡೀ ದೇಶಕ್ಕೆ ಮಾದರಿಯಾಗುವ ಸಮೀಕ್ಷೆ. ಈ ಸಮೀಕ್ಷೆಯಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ ದುರ್ಬಲ ವರ್ಗಗಳ ಪಟ್ಟಿ ಸಿದ್ಧವಾಯಿತು. ದಿನೇ ದಿನೇ ದುರ್ಬಲ ವರ್ಗಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು.

ಭಾರತೀಯ ದುರ್ಬಲ ವರ್ಗ ಸಮುದಾಯ ಅಭಿವೃದ್ಧಿಯಾಗುತ್ತಿದೆಯೇ? ಸ್ಥಾನಮಾನಗಳು ಹೆಚ್ಚುತ್ತಿವೆಯೇ? ಎಂದು ಅವಲೋಕಿಸಿದಾಗ, ಅನುಷ್ಠಾನಗೊಂಡ ಯೋಜನೆಗಳ ಪ್ರತಿಫಲಗಳು ಫಲಾನುಭವಿಗಳಿಗೆ ತಲುಪುತ್ತಿಲ್ಲ. ಇದರಿಂದಾಗಿ ಅವರ ಸ‍್ಥಾನಮಾನಗಳು, ಸಾಮಾಜಿಕ ಸ್ಥಿತಿಗತಿಗಳು ಕೆಳಮಟ್ಟದಲ್ಲಿವೆ ಎಂಬುದು ತಿಳಿದುಬರುತ್ತದೆ.

ಈ ದುರ್ಬಲ ವರ್ಗಗಳನ್ನು ಅಭಿವೃದ್ಧಿಯ ಪ್ರಕ್ರಿಯೆಯೊಳಗೆ ತರಲು ಪ್ರಯತ್ನಗಳು ನಡೆಯುತ್ತಿವೆ. ಈ ಮೊದಲು ಇವರ ಅಭಿವೃದ್ದಿಗೆ ಪೂರಕವಾಗಿ ಸಾಮಾಜಿಕ ನ್ಯಾಯ, ಸಮತೋಲನ ಅಭಿವೃದ್ಧಿ ಎಂಬ ಪದಗಳನ್ನು ಬಳಸುತ್ತಿದ್ದರು. ಆದರೆ, ಈಗ ‘ಒಳಗೊಳ್ಳುವಿಕೆಯ ಅಭಿವೃದ್ಧಿ’ ಎಂಬ ಹೊಸ ಪದಬಳಕೆಯಿಂದ ದುರ್ಬಲರನ್ನು ಒಳಸೇರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇವರ ಏಳಿಗೆಗಾಗಿ 20 ಅಂಶಗಳ ಕಾರ್ಯಕ್ರಮದ ಮೂಲಕ ಭೂಮಾಲೀಕತ್ವ, ಉದ್ಯೋಗಾವಕಾಶ, ರಾಜಕೀಯ ಪ್ರಾತಿನಿಧ್ಯ ಇನ್ನೂ ಮೊದಲಾದ ಕ್ಷೇತ್ರಗಳಲ್ಲಿ ಅವರ ಪ್ರಗತಿಯನ್ನು ಸಾಧಿಸಲು ಪ್ರಯತ್ನಿಸುತ್ತಿವೆ. ಅದಕ್ಕಾಗಿ ಮೊದಲಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಟಿ.ವಿಜಯ್ ಮಾತನಾಡಿ, ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ತುಳಿತಕ್ಕೆ ಒಳಗಾಗಿರುವರನ್ನು ದುರ್ಬಲರು ಎಂದು ಹೇಳಬಹುದಾಗಿದೆ. ಈ ದುರ್ಬಲ ವರ್ಗಗಳನ್ನು ಗುರುತಿಸಿ ಮೇಲೆತ್ತುವ ಪ್ರಯತ್ನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿವೆ. ಆಯೋಗಗಳನ್ನು ರಚಿಸಿ ವರದಿಗಳನ್ನು ಪಡೆಯುತ್ತಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ದೊರೆಸ್ವಾಮಿ, ಸಂಯೋಜಕ ಡಾ.ಪುಟ್ಟರಾಜ, ಮನೋವಿಜ್ಞಾನ ವಿಭಾಗದ ಮನೋನ್ಮಣಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: