
ಮೈಸೂರು
ಮಹಾದಾಯಿ ವಿಚಾರವಾಗಿ ಮೌನವಹಿಸಿರುವ ಪ್ರಧಾನಿ ಮೋದಿ, ರಾಜ್ಯ ಸಂಸದರ ವಿರುದ್ಧ ಪ್ರತಿಭಟನೆ
ಮೈಸೂರು,ಫೆ.7-ಮಹಾದಾಯಿ ವಿಚಾರವಾಗಿ ಮೌನವಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯ ಸಂಸದರ ವಿರುದ್ಧ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಖಾಲಿ ಕೊಡ ಹಿಡಿದು ಬುಧವಾರ ನಗರದ ಕಾಡಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ನರೇಂದ್ರ ಮೋದಿಯವರು ಮಹಾದಾಯಿ, ಕಳಸಾ ಬಂಡೂರಿ ಹಾಗೂ ಕಾವೇರಿ ವಿವಾದದ ಬಗ್ಗೆ ಮೌನವಹಿಸಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. `ಗೋವಾ ರಾಜ್ಯಕ್ಕೆ ಬೆಣ್ಣೆ, ಕರ್ನಾಟಕ ರಾಜ್ಯಕ್ಕೆ ಸುಣ್ಣ’ ಎಂಬ ಮಲತಾಯಿಧೋರಣೆ ಕೇಂದ್ರ ಸರ್ಕಾರಕ್ಕೆ ಶೋಭೆ ತರುವಂತದಲ್ಲ. ಮೋದಿಯವರು ಪರಿವರ್ತನಾ ಯಾತ್ರೆಯಲ್ಲಿ ಮಾಡಿದ ಭಾಷಣ ವಿತ್ತಮಂತ್ರಿ ಅರುಣ್ ಜೆಟ್ಲಿ ಅವರ ವೈಭವೀಕರಣವೇ ಹೊರತು ಮತ್ತೇನಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಬಗ್ಗೆ ಮಾತನಾಡದ ಹಾಗೂ ಸವಲತ್ತುಗಳನ್ನು ಘೋಷಿಸಿದ ಮೋದಿ, ಉತ್ತರ ಕರ್ನಾಟಕದಲ್ಲಿ ಹನಿ ನೀರಿಗೂ ಒದ್ದಾಡುತ್ತಿರುವ ಅಲ್ಲಿನ ರೈತರ ಸುಸ್ಥಿತಿಯನ್ನು ನೋಡಿ ಆ ಬಗ್ಗೆ ಸೂಕ್ತ ಪರಿಹಾರಕ್ಕೆ ಪ್ರಯತ್ನಿಸದೆ, ಬಜೆಟ್ ಪ್ರಕಟಿಸಿದ್ದಾರೆ. ನೀರಿಲ್ಲದ ಪ್ರಧಾನಿಯವರ ಕೃಷಿಪರ ಬಜೆಟ್ ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಬಂಡವಾಳಶಾಹಿಗಳ ಪರವಾಗಿರುವ ಕೇಂದ್ರ ಸರ್ಕಾರ ಕಾರ್ಮಿಕ ಸುಧಾರಣೆಯ ಬಗ್ಗೆ ಮಾತನಾಡುವ ಬದಲು ಪ್ರತಿಷ್ಠಿತ ಕಂಪನಿಗಳಾದ ಬಿಇಎಂಎಲ್, ಬಿಎಸ್ಎನ್ಎಲ್ ಖಾಸಗೀಕರಣ ಮಾಡಲು ಹೊರಟಿರುವುದು ಎಷ್ಟು ಸರಿ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಅಧ್ಯಕ್ಷ ಎಸ್.ಬಾಲಕೃಷ್ಣ, ನಾಲಾಬೀದಿ ರವಿ, ರೇವಣ್ಣ, ಬೋಗಾದಿ ಸಿದ್ದೇಗೌಡ, ಗೋಪಿ, ಪ್ಯಾಲೇಸ್ ಬಾಬು, ರಾಧಾಕೃಷ್ಣ, ಪಾಪಣ್ಣ, ಬೀಡಾಬಾಬು, ಚಂದ್ರುಪರಿಸರ, ಸತೀಶ್ ಕೊರಿಯರ್, ಅರವಿಂದ, ಉತ್ತನಹಳ್ಳಿ ಶಂಕರ, ರವಿ ರಾಯನಹುಂಡಿ, ಸ್ವಾಮಿ, ರಮೇಶ್ ಡೋಲು, ನಾಗೇಂದ್ರ, ಜೇಸನಹಳ್ಳಿ ರಾಮಚಂದ್ರಚಾರಿ, ಮಹದೇವಯ್ಯ ಭಾಗವಹಿಸಿದ್ದರು. (ವರದಿ-ಎಚ್.ಎನ್, ಎಂ.ಎನ್)