ಕರ್ನಾಟಕಪ್ರಮುಖ ಸುದ್ದಿ

ಜೈನ್ ಧರ್ಮದಲ್ಲಿ ಪ್ರಕೃತಿ ಸಂರಕ್ಷಣೆಯ ಸಂದೇಶವಿದೆ : ರಾಷ್ಟ್ರಪತಿ ರಾಮನಾಥ್ ಕೋವಿಂದ್

ರಾಜ್ಯ(ಹಾಸನ)ಫೆ.7:-  ಜೈನ್ ಧರ್ಮದಲ್ಲಿ ಪ್ರಕೃತಿಯ ಸಂರಕ್ಷಣೆಯ ಸಂದೇಶವಿದೆ  ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿಳಿಸಿದ್ದಾರೆ.

12 ವರ್ಷಗಳಿಗೊಮ್ಮೆ ನಡೆಯುವ ಶ್ರವಣಬೆಳಗೊಳದ ಬಾಹುಬಲಿಯ 88ನೇ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅವರು ಮೊದಲು ಕನ್ನಡದಲ್ಲಿಯೇ ಮಾತು ಆರಂಭಿಸಿದರು. ಜೈನ್ ಧರ್ಮದ ಮಸ್ತಕಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ಸೌಭಾಗ್ಯ ತಂದಿದೆ. ರಾಷ್ಟ್ರಪತಿ ಆದ ಮೇಲೆ ರಾಜ್ಯಕ್ಕೆ ಮತ್ತೊಮ್ಮೆ ಭೇಟಿ ನೀಡುತ್ತಿದ್ದೇನೆ. ಅಹಿಂಸಾ ಪರಂಪರೆಯ ಭಾಗವಾಗಿರುವುದು ನನಗೆ ಸಂತೋಷವಾಗಿದೆ. ಬಾಹುಬಲಿಯ ತತ್ವ ನಮಗೆ ಮಾದರಿ. ನಿರ್ಜೀವ ಕಲ್ಲಿನಲ್ಲಿ ಬಾಹುಬಲಿಯ ತತ್ವಗಳು ಜೀವತುಂಬಿವೆ.ಇಡೀ ವಿಶ್ವಕ್ಕೆ ಜೈನತತ್ವಗಳು ಪೂರಕವಾಗಿದ್ದು,ಇವುಗಳನ್ನು ಅನುಸರಿಸಿದರೆ ವಿಶ್ವದ ಕಲ್ಯಾಣವಾಗಲಿದೆ. ಬಾಹುಬಲಿಯ ಮುಖದಲ್ಲಿ ಆತಂಕದ ಭಾವನೆ ಸರಿದೂಗಿಸುವ ನಗುವಿದೆ. ಮಸ್ತಕಾಭಿಷೇಕಕ್ಕೆ ಸಂತಸದಿಂದ ಶುಭಕೋರುತ್ತೇನೆ ಎಂದರಲ್ಲದೇ ಮಸ್ತಕಾಭಿಷೇಕ ಅಭಿವೃದ್ಧಿ ಕಾಮಗಾರಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರಕಾರವು ಚಾರುಕೀರ್ತಿ ಸ್ವಾಮೀಜಿ ಯೊಂದಿಗೆ ಬಾಹುಬಲಿ ಮಸ್ತಕಾಭಿಷೇಕ ಮಹೋತ್ಸವ ಆಚರಣೆ ಮಾಡುತ್ತಿರುವುದು ನಮ್ಮ ಸೌಭಾಗ್ಯ. ಬಾಹುಬಲಿ ಸ್ವಾಮಿಯ 88ನೆ ಮಹಾ ಮಸ್ತಕಾಭಿಷೇಕದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಮಹೋತ್ಸವ ಯಶಸ್ವಿಯಾಗಿ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ. ಜೈನ ಧರ್ಮವು ಸಮಾಜದಲ್ಲಿ ಅಹಿಂಸಾ ತತ್ವದ ಮೂಲಕ ಶಾಂತಿ ಸಂದೇಶ ಸಾರುತ್ತಿದೆ.ಬಾಹುಬಲಿ ಸಂದೇಶ ಇಂದಿಗೂ ನಮಗೆ ದಾರಿದೀಪವಾಗಿದೆ. ಮೈತ್ರಿ ಯಿಂದ ಪ್ರಗತಿ ಆಗಲಿದೆ ಎಂಬ ಬಾಹುಬಲಿ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದೇ ದಾರಿಯಲ್ಲಿ ನಡೆದರೆ ಅದು ಬಾಹುಬಲಿಗೆ ಸಲ್ಲಿಸುವ ಗೌರವ ವಾಗಿದೆ. ಧರ್ಮ ಧರ್ಮಗಳ ನಡುವೆ ದ್ವೇಷವಿದ್ದು, ಇವೆಲ್ಲವೂ ತೊಲಗುವವರೆಗೂ ಶಾಂತಿ ನೆಲೆಸುವುದಿಲ್ಲ. ಅಲ್ಲದೆ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ .ಯಾವದೇ ಧರ್ಮದಲ್ಲಿ ಮತ್ತೊಂದು ಧರ್ಮ ದ್ವೇಷಿಸುವ ಅಂಶಗಳಿಲ್ಲ .ಎಲ್ಲ ಧರ್ಮಗಳೂ ಮಾನವೀಯ ಮೌಲ್ಯಗಳನ್ನು ಸಾರಿ ಹೇಳುತ್ತಿವೆ. ಬಾಹುಬಲಿ ತ್ಯಾಗದ ಸಂಕೇತವಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿರೂಢಬಾಯಿ ವಾಲಾ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ,  ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ,ಮಾಜಿ ಸಚಿವ ಹೆಚ್.ಡಿ.ರೇವಣ್ಣ,ಸಚಿವ ಎ.ಮಂಜು, ಅಭಯಚಂದ್ರ ಜೈನ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: