ದೇಶಪ್ರಮುಖ ಸುದ್ದಿ

ನಟಿಯ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ: ನಟ ದಿಲೀಪ್ ಗೆ ವಿಡಿಯೋ ಪ್ರತಿ ಕೊಡಲು ಕೋರ್ಟ್ ನಕಾರ

ಕೇರಳ,ಫೆ.7-ಬಹುಭಾಷಾ ನಟಿಯನ್ನು ಅಪಹರಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿರುವ ಸಂಬಂಧ ಆ ದೃಶ್ಯಗಳ ಪ್ರತಿಯನ್ನು ನೀಡುವಂತೆ ನಟ ದಿಲೀಪ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಅಂಗಮಾಲಿ ಕೋರ್ಟ್ ವಜಾಗೊಳಿಸಿದೆ. ಅಲ್ಲದೆ, ಪ್ರಕರಣದ ವಿಚಾರಣೆಯನ್ನು ಎರ್ನಾಕುಳಂ ಜಿಲ್ಲಾ ಸೆಷನ್ಸ್ ಕೋರ್ಟಿಗೆ ವರ್ಗಾಯಿಸಲಾಗಿದೆ.

ಪ್ರಕರಣದ ದೃಶ್ಯಗಳ ಸಹಿತ ಪುರಾವೆಗಳು ಸಿಗಬೇಕೆಂದು ದಿಲೀಪ್ ಅರ್ಜಿ ಸಲ್ಲಿಸಿದ್ದರು. ಆದರೆ ದಿಲೀಪ್‍ಗೆ ದೃಶ್ಯಗಳ ಪ್ರತಿಯನ್ನು ನೀಡಬಾರದೆಂದು ಪ್ರಾಸಿಕ್ಯೂಶನ್ ವಾದಿಸಿತ್ತು. ಪ್ರಕರಣ ನಡೆಸಲು ಪುರಾವೆಗಳನ್ನು ಪಡೆಯುವ ಹಕ್ಕು ತನಗೆ ಇದೆ ಎಂದು ದಿಲೀಪ್ ಪರ ವಕೀಲರು ಕೋರ್ಟ್ ನಲ್ಲಿ ವಾದಿಸಿದ್ದರು. ವಿಡಿಯೋದ ಪ್ರತಿ ನೀಡಿದರೆ ಅದನ್ನು ದುರುಪಯೋಗಪಡಿಸುವ ಮತ್ತು ನಟಿಯ ಖಾಸಗಿ ಜೀವನಕ್ಕೆ ತೊಂದರೆಯಾಗಬಹುದೆಂಬ ಎಂಬ ಕಾರಣಕ್ಕೆ ವಿಡಿಯೋ ಪ್ರತಿ ನೀಡಲು ನ್ಯಾಯಾಲಯ ನಿರಾಕರಿಸಿದೆ.

2017ರ ಫೆಬ್ರವರಿಯಲ್ಲಿ ನಟಿ ಚಿತ್ರೀಕರಣ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಪ್ರಕರಣ ಸಂಬಂಧ ನಟ ದಿಲೀಪ್ ಸೇರಿದಂತೆ 12 ಮಂದಿಯ ವಿರುದ್ಧ ಡಿಸೆಂಬರ್ ನಲ್ಲಿ ತ್ವರಿತ ನ್ಯಾಯಾಲಯ ಆರೋಪ ಪಟ್ಟಿ ಸ್ವೀಕರಿಸಿತ್ತು. ಇದರಲ್ಲಿ ದಿಲೀಪ್ ಅವರ ಮಾಜಿ ಪತ್ನಿ ಮಂಜು ವಾರಿಯರ್ ಪ್ರಮುಖ ಸಾಕ್ಷಿಯಾಗಿದ್ದಾರೆ. ಪ್ರಕರಣದ ಮುಖ್ಯ ಆರೋಪಿ ಪಲ್ಸರ್ ಸುನಿ ಹಾಗೂ ನಟ ದಿಲೀಪ್ ಆಗಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ 2017ರ ಜುಲೈ 10ರಂದು ದಿಲೀಪ್ ಅವರನ್ನು ಬಂಧಿಸಲಾಗಿತ್ತು. 85 ದಿನ ಜೈಲಿನಲ್ಲಿದ್ದ ದಿಲೀಪ್ ನಂತರ ಷರತ್ತುಬದ್ಧ ಜಾಮೀನು ಪಡೆದು ಹೊರಬಂದಿದ್ದರು. ವಿಚಾರಣೆ ಸಂದರ್ಭದಲ್ಲಿ ನಟಿಗೆ ಕಾರಿನಲ್ಲಿ ನೀಡಲಾಗಿದ್ದ ಲೈಂಗಿಕ ಕಿರುಕುಳ ವಿಡಿಯೋವನ್ನು ನೋಡಲು ದಿಲೀಪ್ ಮತ್ತು ಅವರ ಪರ ವಕೀಲರಿಗೆ ಅವಕಾಶ ನೀಡಲಾಗಿತ್ತು. ವಿಡಿಯೋದ ನಿಖರತೆ ಬಗ್ಗೆ ಸಂಶಯವಿರುವುದರಿಂದ ತಿರುಚಿರುವ ಸಾಧ್ಯತೆಯಿರುವುದರಿಂದ ಅದರ ಪ್ರತಿಯೊಂದನ್ನು ತಮಗೆ ನೀಡಬೇಕೆಂದು ದಿಲೀಪ್ ನ್ಯಾಯಾಲಯಕ್ಕೆ ಕೋರಿದ್ದರು. ಸಾಕ್ಷಿಗಳ ಹೇಳಿಕೆ ಸಹಿತ ಸಿಸಿಟಿವಿ ದೃಶ್ಯಗಳು ಸೇರಿ ಪ್ರಕರಣಕ್ಕೆ ಸಂಬಂಧಿಸಿದ ಪುರಾವೆಗಳನ್ನು ಕಳೆದ ವಾರ ಕೋರ್ಟು ದಿಲೀಪ್‍ಗೆ ಹಸ್ತಾಂತರಿಸಿತ್ತು. (ವರದಿ-ಎಂ.ಎನ್)

Leave a Reply

comments

Related Articles

error: