ಕರ್ನಾಟಕಪ್ರಮುಖ ಸುದ್ದಿ

ಕೆಎಸ್ಆರ್ ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು ಚಾಲಕರ ಸಾವು

ಮಡಿಕೇರಿ,ಫೆ.8-ಎರಡು ಕೆಎಸ್ಆರ್ ಟಿಸಿ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಚಾಲಕರು ಮೃತಪಟ್ಟಿರುವ ಘಟನೆ ಗುರುವಾರ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸಮೀಪದ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ನಡೆದಿದೆ.

ಪಾಲಾಕ್ಷ ಹಾಗೂ ಷರೀಪ್ ಮೃತಪಟ್ಟ ಚಾಲಕರು. ಪುತ್ತೂರು ವಿಭಾಗದ ಮಡಿಕೇರಿ ಡಿಪೋ ಬಸ್ (ಕೆಎ 19 ಎಫ್ 3240) ಹಾಗೂ ಮೈಸೂರು ಗ್ರಾಮಾಂತರ ವಿಭಾಗದ ಹುಣಸೂರು ಡಿಪೋ ಬಸ್ (ಕೆಎ 09 ಎಫ್ 4989) ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಓರ್ವ ಪ್ರಯಾಣಿಕನ ಸ್ಥಿತಿ ಗಂಭೀರವಾಗಿದ್ದು, 20ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಮಡಿಕೇರಿಯಿಂದ ಕುಶಾಲನಗರ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿದ್ದ ಬಸ್ ಹಾಗೂ ಮೈಸೂರಿನಿಂದ ಕುಶಾಲನಗರ ಮಾರ್ಗವಾಗಿ ಮಡಿಕೇರಿಗೆ ಬರುತ್ತಿದ್ದ ಬಸ್ ನಡುವೆ ರಾಷ್ಟ್ರೀಯ ಹೆದ್ದಾರಿ 275ರ ಶಾಂತಿಗಿರಿ ಬಳಿಯ ತಿರುವಿನಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಹಾಸನ ಕಡೆಗೆ ತೆರಳುತ್ತಿದ್ದ ಬಸ್ ಚಾಲಕ ಪಾಲಾಕ್ಷ ಎಂಬವರ ಅಜಾಗರುಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಮುಂಬದಿಯಿಂದ ಬರುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಎರಡು ಬಸ್ ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಇದರಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಗಾಯಾಳುಗಳನ್ನು ಅಂಬ್ಯುಲೆನ್ಸ್ ಸೇರಿದಂತೆ ಕಾರು, ಬಸ್ ಆಟೋಗಳಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ-ಕೆಸಿಐ, ಎಂ.ಎನ್)

Leave a Reply

comments

Related Articles

error: