ಕರ್ನಾಟಕ

ಸಮಸ್ಯೆಗಳ ಜೊತೆಗೆ ಸಮಸ್ಯೆಯನ್ನು ಹುಟ್ಟಾಕೋದೆ ಕಾಂಗ್ರೆಸ್‌ ಸರ್ಕಾರದ ತೀರ್ಮಾನ : ಹೆಚ್.ಡಿ. ಕುಮಾರಸ್ವಾಮಿ ಟೀಕೆ

ರಾಜ್ಯ( ಮಂಡ್ಯ )ಫೆ.8:- ಸಮಸ್ಯೆಗಳ ಜೊತೆಗೆ ಸಮಸ್ಯೆಯನ್ನು ಹುಟ್ಟಾಕೋದೆ ಕಾಂಗ್ರೆಸ್‌ ಸರ್ಕಾರದ ತೀರ್ಮಾನಗಳು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಸರ್ಕಾರಕ್ಕೆ ಸಾಮಾನ್ಯ ತಿಳುವಳಿಕೆ ಕೂಡ ಇಲ್ಲ. ಸಮಸ್ಯೆಗಳ ಜೊತೆಗೆ ಸಮಸ್ಯೆಯನ್ನು ಹುಟ್ಟಾಕೋದೆ ಕಾಂಗ್ರೆಸ್‌ ಸರ್ಕಾರದ ತೀರ್ಮಾನ ಎಂದರು. ಮಠಮಾನ್ಯಗಳನ್ನು ಮುಜರಾಯಿ ಇಲಾಖೆ ವಶ ಪಡಿಸಿಕೊಳ್ಳುವ ಸುತ್ತೋಲೆ ವಿಚಾರಕ್ಕೆ ಸಂಬಂಧಿಸಿದಂತೆ ಪೇಜಾವರ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಶ್ರೀಗಳು ಮಠವನ್ನು ಬಿಟ್ಟು ಹೋರ ನಡೆದರೆ ದೇಶದ ಸಂಸ್ಕೃತಿ, ಧರ್ಮವನ್ನು ಉಳಿಸೋದು ಯಾರು. ಸರ್ಕಾರಕ್ಕೆ ಸಮಸ್ಯೆಗಳನ್ನು  ಬಗೆ ಹರಿಸೋಕೆ ಆಗದೇ ಇರೋದನ್ನು  ಮಠ ಮಾನ್ಯಗಳು ಬಗೆ ಹರಿಸುತ್ತಿವೆ. ಇಂತಹ ಮಠಗಳನ್ನು ಸರ್ಕಾರ ವಶಪಡಿಸಿಕೊಂಡು ಹಾಳು ಮಾಡಲು ಹೊರಟಿದೆ. ಸರ್ಕಾರದ ಸುತ್ತೋಲೆ ನೋಡಿ ಹೆದರಿ ಮಠಗಳನ್ನು ಬಿಡುವ ಅವಶ್ಯಕತೆ ಇಲ್ಲ. ಇಂತ ನಿರ್ಧಾರಗಳನ್ನು ಮಾಡುವ ರಾಜಕೀಯ ವ್ಯಕ್ತಿಗಳನ್ನ ನೀವು ಒದ್ದು ಹೊರ ಹಾಕಬೇಕು ಎಂದು ಎಲ್ಲಾ ಮಠಾಧೀಶರಲ್ಲಿ ಮನವಿ ಮಾಡಿದರು. ಸರ್ಕಾರದ ತೀರ್ಮಾನ ಅನಾಗರೀಕ ತೀರ್ಮಾನ. ಇವರು ಮತ್ತೆಂದು ರಾಜಕೀಯದಲ್ಲಿ ತಲೆ ಎತ್ತಬಾರದು.  ಇಂತ ಸುತ್ತೋಲೆ ಹೊರಡಿಸಿರುವವರಿಗೆ ತಲೆ ಕೆಟ್ಟಿದೆ ಎಂದರು.  ರಮ್ಯಾ ಟ್ವೀಟ್ ಕುರಿತು ಪ್ರತಿಕ್ರಿಯಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಟ್ವಿಟ್ಟರ್ ಕೆಸರೆರಚಾಟದಲ್ಲಿ ನಾನು ಭಾಗಿ ಆಗಲ್ಲ. ಅವರು ಟ್ವೀಟರ್ ಗೌರವವನ್ನೇ  ಹಾಳು ಮಾಡುತ್ತಿದ್ದಾರೆ. ಫೇಕ್ ಅಕೌಂಟ್ ಕ್ರಿಯೇಟ್ ಮಾಡುವಂತೆ ಪಾಠ ಮಾಡ್ತಾ ಹೇಳ್ತಿರೋದು ಸಮಾಜದಲ್ಲಿ ಒಳ್ಳೆ ಬೆಳವಣಿಗೆ ಅಲ್ಲ ಅಂತ ನಟಿ ರಮ್ಯಾಗೆ ಟಾಂಗ್ ನೀಡಿದರು. ಇದೇ ತಿಂಗಳು ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಕಾರ್ಯಕರ್ತರ ಸಭೆ ನಡೆಸಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: