ಕರ್ನಾಟಕ

ಕುಮಾರಸ್ವಾಮಿ ಬಳಗದವರಿಗೆ ಪ್ರಾಥಮಿಕ ಸದಸ್ಯತ್ವವಿಲ್ಲ: ರವಿ ಕಿರಣ್ ಟೀಕೆ

ಮಡಿಕೇರಿ,ಫೆ.8-ಜಾತ್ಯತೀತ ಜನತಾದಳ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಹೊಂದದೆ ಪಕ್ಷದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅವರ ವಿರುದ್ಧ ಹೇಳಿಕೆಗಳನ್ನು ನೀಡಿರುವ ಕುಮಾರಸ್ವಾಮಿ ಅಭಿಮಾನಿಗಳ ಬಳಗದ ಅಧ್ಯಕ್ಷ ಚಿಲ್ಲನ ದರ್ಶನ್ ಬಹಿರಂಗವಾಗಿ ಕ್ಷಮೆ ಯಾಚಿಸಬೇಕೆಂದು ಜಿಲ್ಲಾ ಯುವ ಜನತಾದಳದ ಮಡಿಕೇರಿ ಘಟಕದ ಅಧ್ಯಕ್ಷ ರವಿ ಕಿರಣ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಕಾರ್ಯನಿರ್ವಹಿಸುವ ಅಭಿಮಾನಿ ಬಳಗದ ಬಗ್ಗೆ ತಮಗೆ ಮೆಚ್ಚುಗೆ ಇದೆ. ಆದರೆ, ಪಕ್ಷದ ಸದಸ್ಯತ್ವವನ್ನೇ ಹೊಂದದ ಅದರ ಅಧ್ಯಕ್ಷರು ಮತ್ತು ಸದಸ್ಯರಿಗೆ ಜೆಡಿಎಸ್ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲವೆಂದು ಸ್ಪಷ್ಟಪಡಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅವರು ಜನರ ಸಂಕಷ್ಟಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸುತ್ತಿದ್ದು, ವೀರಾಜಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿನ ಕಾಡಾನೆ ಹಾವಳಿ ಸೇರಿದಂತೆ ವಿವಿಧ ಘಟನಾವಳಿಗಳ ಸಂದರ್ಭ ಅವರು ಖುದ್ದು ಸ್ಥಳಕ್ಕೆ ತೆರಳಿ ಜನರ ನೋವಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇಂತಹ ಸಂಕೇತ್ ಪೂವಯ್ಯ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಮೊದಲಾಗಿ ಹೇಳಿಕೆ ನೀಡುವುದು ಖಂಡನೀಯವೆಂದು ಹೇಳಿದರು.

ಕುಮಾರಸ್ವಾಮಿ ಅಭಿಮಾನಿ ಬಳಗದವರಿಗೆ ಪಕ್ಷದ ಅಧ್ಯಕ್ಷರಿಗೆ ಸಂಬಂಧಿಸಿದಂತೆ ಯಾವುದೇ ಭಿನ್ನಾಭಿಪ್ರಾಯಗಳಿದ್ದಲ್ಲಿ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಲು ಅವಕಾಶವಿತ್ತು. ಆದರೆ, ಇದನ್ನು ಬಿಟ್ಟು ಏಕಾಏಕಿ ಹೇಳಿಕೆ ನೀಡಿರುವುದು ಸಮಂಜಸವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷದ ಸಂಘಟನೆಗಾಗಿ ಶ್ರಮಿಸುತ್ತಿರುವ ಸಂಕೇತ್ ಪೂವಯ್ಯ ಅವರನ್ನು ಮಂದಿನ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದ ಅವರು, ಪಕ್ಷದ ಬಲವರ್ಧನೆಗಾಗಿ 20 ರಿಂದ 25 ಕಾರ್ಯಕರ್ತರ ತಂಡ ಪ್ರತಿ ವಿಭಾಗದಲ್ಲೂ ಕಾರ್ಯನಿರ್ವಹಿಸುತ್ತಿದ್ದು, ಪಕ್ಷದ ಪ್ರಮುಖರಾದ ಕೆ.ಎಂ.ಗಣೇಶ್ ಅವರು ಶ್ರಮಿಸುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯುವ ಜೆಡಿಎಸ್ ವಕ್ತಾರ ಧನಂಜಯ ಶೆಟ್ಟಿ, ನಗರ ಪ್ರಧಾನ ಕಾರ್ಯದರ್ಶಿ ಅಜಿತ್ ಕೊಟ್ಟಕೇರಿಯನ, ಉಪಾಧ್ಯಕ್ಷ ಸುದೀಪ್ ಶೆಟ್ಟಿ, ನಗರ ಸಂಘಟನಾ ಕಾರ್ಯದರ್ಶಿ ಗೋಪಿನಾಥ್, ಶೇಖರ್ ಹಾಜರಿದ್ದರು. (ವರದಿ-ಕೆಸಿಐ, ಎಂ.ಎನ್)

Leave a Reply

comments

Related Articles

error: