ಪ್ರಮುಖ ಸುದ್ದಿಮೈಸೂರು

ಲೈಂಗಿಕ ಅಲ್ಪಸಂಖ್ಯಾತರ ಉಪಟಳಕ್ಕೆ ಹೈರಾಣಾಗಿದ್ದಾರೆ ಜನತೆ; ದೂರು ನೀಡಿದಲ್ಲಿ ಸೂಕ್ತ ಕ್ರಮ -ಡಿಸಿ ಭರವಸೆ

ಅವರು ಎದುರಿಗೆ ಬಂದರೆ ನಾವು ಮಾಡಲು ಹೊರಟಿರುವ ಕಾರ್ಯಕ್ಕೆ ಯಶ ಸಿಗುತ್ತದೆ ಎನ್ನುವ ಕಾಲವೊಂದಿತ್ತು. ಆದರೆ ಈಗ ಅವರು ಎದುರಿಗೆ ಬಂದರೆ ಹೇಗಪ್ಪಾ ಅವರಿಂದ ತಪ್ಪಿಸಿಕೊಳ್ಳೋದು ಎನ್ನುವ ಯೋಚನೆಯಲ್ಲಿ ಕೆಲವರು ತೊಡಗಿದ್ದರೆ  ಇನ್ಕೆಲವರು ಯಾಕಾದರೂ ಅವರು ಬರುತ್ತಿದ್ದಾರೇನೋ ನಮ್ಮ ಜೀವ ತಿನ್ನೋದಕ್ಕೆ ಎನ್ನುವ ಮಾತುಗಳು ಅವರ ಕಾಟದಿಂದ ಹೈರಾಣಾದವರ ಬಾಯಲ್ಲಿ ಕೇಳಿ ಬರುತ್ತಿದೆ ಹಾಗಾದರೆ ಯಾರವರು …?

ಅದಕ್ಕಿಲ್ಲಿದೆ ಉತ್ತರ. ಸಾಂಸ್ಕೃತಿಕ  ನಗರಿ ಮೈಸೂರು ಕೇವಲ ಅರಮನೆಗಳ ನಗರಿ ಮಾತ್ರವಲ್ಲ ಶಾಂತನಗರಿಯೂ ಹೌದು. ನಿವೃತ್ತರ ಸ್ವರ್ಗ ಎಂತಲೇ ಕರೆಯಲ್ಪಡುವ ಸಿಂಗಾರದ ಮೈಸೂರು ಇಂದು ಕಾಲಕ್ಕೆ ತಕ್ಕಂತೆ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಹಾವಳಿಯ ಕೇಂದ್ರವಾಗಿ ಬದಲಾಗುತ್ತಿರುವುದರ ಜೊತೆ ನಗರದಲ್ಲಿ ಅವರ ಉಪಟಳ ಹೆಚ್ಚಾಗಿದೆ.

ಯಾವ ಹೊಡೆದಾಟ ಬಡಿದಾಟವೂ ಇಲ್ಲದೆ ಸದಾ ಶಾಂತವಾಗಿರುತ್ತಿದ್ದ ನಗರದಲ್ಲಿ ಇಂದು ಸರಗಳ್ಳತನ, ಕೊಲೆ, ಸುಲಿಗೆ ಎಗ್ಗುಸಿಗ್ಗಿಲ್ಲದೆ ನಡೆಯುತ್ತಿದೆ. ಇದೆಲ್ಲದರ ನಡುವೆ ಲೈಂಗಿಕ ಅಲ್ಪಸಂಖ್ಯಾತರ ಹಾವಳಿ ಮಿತಿಮೀರಿದೆ. ತಮ್ಮ ಗಡಸು ಧ್ವನಿಯಿಂದ, ಚಪ್ಪಾಳೆ ಸದ್ದಿನೊಂದಿಗೆ ಭಿಕ್ಷೆ ಬೇಡುತ್ತಾ, ಕೊಡದಿದ್ದರೆ ಕಾಡುತ್ತಾ ಎಲ್ಲರನ್ನೂ ಮುಜುಗರಕ್ಕೀಡು ಮಾಡುತ್ತಿದ್ದ ಲೈಂಗಿಕ ಅಲ್ಪಸಂಖ್ಯಾತರು  ಇಂದು ತಮ್ಮ ವ್ಯಾಪ್ತಿ ಮೀರಿ ವರ್ತಿಸುತ್ತಿದ್ದಾರೆ. ನಗರದಲ್ಲಿ ನಡೆಯುವ ಎಲ್ಲಾ ಮದುವೆ ಮನೆಗಳಿಗೂ ತೆರಳಿ ಕೇಳಿದಷ್ಟು ಮಾಮೂಲು ನೀಡುವಂತೆ ಒತ್ತಾಯಿಸುತ್ತಾರೆ. ಕೊಡದಿದ್ದರೆ ಬಾಯಿಗೆ ಬಂದಂತೆ ಶಾಪ ಹಾಕುತ್ತಾರೆ. ಇದರಿಂದ ಮದುವೆ ಸಂಭ್ರಮದಲ್ಲಿದ್ದವರು ತೊಂದರೆ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದಲ್ಲಿರುವ ಎಲ್ಲಾ ಮದುವೆ ಛತ್ರಗಳಿಗೆ ತಂಡವಾಗಿ ತೆರಳುವ ಇವರು ಕೇಳಿದಷ್ಟು ಹಣ ನೀಡಲೇಬೇಕು. ಖುಷಿಯಿಂದ ಕೊಟ್ಟಷ್ಟು ತೆಗೆದುಕೊಳ್ಳುವುದಿಲ್ಲ. ಕೊಡದಿದ್ದರೆ ಬಿಡುವುದಿಲ್ಲ. ಎಲ್ಲರ ಮುಂದೆಯೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಸ್ವಲ್ಪ ಏರು ಧ್ವನಿಯಲ್ಲಿ ಗದರಿ ಪೊಲೀಸರಿಗೆ ತಿಳಿಸುತ್ತೇವೆ ಎಂದು ಹೇಳಿದರೆ, ನಾವು ‘ಕಾಣದೆ ಇರುವ ಪೊಲೀಸರೆ ..?ಯಾವ ಸ್ಟೇಷನ್‍ಗೆ ಬೇಕಾದ್ರು ಬರ್ತೀವಿ  ಬನ್ನಿ’ಎಂದು ಗಲಾಟೆ ಮಾಡುತ್ತಾರೆ. ಇದರಿಂದ ಅವರ ಸಹವಾಸವೇ ಬೇಡ ಎಂದು ಮದುವೆ ಮನೆಯಿಂದ ಸಾಗಿ ಹಾಕಲು ಕೇಳಿದಷ್ಟು ಹಣ ನೀಡಿ ಕಳುಹಿಸುವ ದುಸ್ಥಿತಿ ನಿರ್ಮಾಣವಾಗಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಕೆಲವರು ಹಣ ಮಾಡುವ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ಮದುವೆ ಮನೆಗಳಲ್ಲದೆ ನಗರದ ಕೆಲವೆಡೆ ಭಿಕ್ಷೆ ಬೇಡುವ ಸಂದರ್ಭಗಳಲ್ಲಿ ಸಾರ್ವಜನಿಕರೊಂದಿಗೆ ಅಸಭ್ಯವಾಗಿಯೂ ವರ್ತಿಸುತ್ತಿದ್ದಾರೆ.

ತಮ್ಮ ಮದುವೆಯಲ್ಲಿ ತಮಗಾದ ಅನುಭವವನ್ನು ಸಿಟಿ ಟುಡೆಯೊಂದಿಗೆ ಹಂಚಿಕೊಂಡಿರುವ ಮಾದಪ್ಪ ಎಂಬುವರು, ನಗರದ ವಿಶ್ವೇಶ್ವರ ನಗರದಲ್ಲಿರುವ ನಿತ್ಯಾನಂದ ಛತ್ರದಲ್ಲಿ ಮದುವೆ ನಡೆಯುತ್ತಿತ್ತು. ಅಂದು ಆರತಕ್ಷತೆಗೆ ಸಿದ್ಧತೆ ಮಾಡಿಕೊಳ್ಳುವಾಗ ರೂಮಿನೊಳಗೆ ಏಕಾಏಕಿ ನುಗ್ಗಿದ ಅಲ್ಪಸಂಖ್ಯಾತರು ಮಾಮೂಲಿ ನೀಡುವಂತೆ ಕೇಳಿದಾಗ ನೂರು ರೂ ನೀಡಿದೆ. ಆದರೆ, ಅವರು ಅದನ್ನು ಸ್ವೀಕರಿಸದೆ ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟರು. ಕೊಡದೇ ಇದ್ದಾಗ ಜಗಳಕ್ಕೆ ಮುಂದಾದರು. ಪೊಲೀಸರಿಗೆ ತಿಳಿಸುತ್ತೇವೆ ಎಂದರೂ ಬಗ್ಗಲಿಲ್ಲ. ಹೆಚ್ಚಿನ ಹಣ ನೀಡುವವರೆಗೂ ಮದುವೆ ಮನೆ ಬಿಟ್ಟು ತೆರಳುವುದಿಲ್ಲ ಎಂದು ಪಟ್ಟುಹಿಡಿದರು. ಅವರು ಶಾಪ ಹಾಕಿದರೆ ಒಳ್ಳೆಯದಲ್ಲ ಎಂದು ಕೊನೆಗೆ 200 ರೂ. ನೀಡಿ ಕಳುಹಿಸಬೇಕಾಯಿತು. ನಗರದ ಎಲ್ಲಾ ಛತ್ರಗಳಲ್ಲೂ ಇದೇ ರೀತಿ ನಡೆಯುತ್ತಿದೆ. ಕೊಡದಿದ್ದರೆ ಜಗಳ ಮಾಡಿ ಶಾಪ ಹಾಕುತ್ತಾರೆ. ಇದಕ್ಕೆ ಸಂಬಂಧಪಟ್ಟವರು ಸೂಕ್ತಕ್ರಮ ಕೈಗೊಂಡು ಇದನ್ನು ನಿಯಂತ್ರಣಕ್ಕೆ ತರಬೇಕು ಎಂದು ಮನವಿ ಮಾಡಿದರು.

ಈ ಕುರಿತು ಜಿಲ್ಲಾಧಿಕಾರಿ ರಂದೀಪ್ ಅವರನ್ನು ಸಿಟಿಟುಡೆ ಮಾತನಾಡಿಸಿದಾಗ ಅವರು ಹೇಳಿದ್ದೇನೆಂದರೆ ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದು ಅನುದಾನ ಬಿಡುಗಡೆ ಮಾಡುತ್ತಿರುವಾಗ ಮದುವೆ ಮನೆಗಳಿಗೆ ತೆರಳಿ ಇಷ್ಟೇ ಹಣ ಬೇಕು ಅಷ್ಟೇ ಹಣ ಬೇಕು ಎಂದು ಬೇಡಿಕೆಯಿಡುವುದು ತಪ್ಪು. ಲೈಂಗಿಕ ಅಲ್ಪಸಂಖ್ಯಾತರಲ್ಲದೆ ಯಾರೇ ಆದರೂ ಸಾರ್ವಜನಿಕರಿಗೆ ತೊಂದರೆಯಾಗುವಂತಹ ಕೆಲಸ ಮಾಡಬಾರದು. ಭಿಕ್ಷೆ  ಬೇಡುವ ನೆಪದಲ್ಲಿ ಹಿಂಸೆ ಮಾಡಬಾರದು. ಈ ಸಂಬಂಧ ಲಿಖಿತ ದೂರು ನೀಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಸರ್ಕಾರಿ ಛತ್ರವಾದ ನಂಜರಾಜ ಬಹುದ್ದೂರ್ ಛತ್ರದಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಕ್ರಮವಹಿಸಲಾಗುವುದು ಎಂದರು.

ಒಟ್ಟಿನಲ್ಲಿ ಅವರ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಸಾಂಸ್ಕೃತಿಕ ನಗರಿಯ ಜನತೆಯ ನೆಮ್ಮದಿ ಕೆಡಿಸಿದೆ. ಇನ್ನಾದರೂ ಇದಕ್ಕೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಂಡಾರೆಯೇ ಎನ್ನುವ ಆಶಾಭಾವನೆ ಇಲ್ಲಿನ ಜನತೆಯದ್ದು.

ಬಿಎಂ

Leave a Reply

comments

Related Articles

error: