ಮೈಸೂರು

ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅರಣ್ಯ ಇಲಾಖೆಯ ದಿನಗೂಲಿ ನೌಕರರ ಮುಷ್ಕರ

ಮೈಸೂರು,ಫೆ.9:- ಅರಣ್ಯ ಇಲಾಖೆಯ ದಿನಗೂಲಿ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಿದರು.

ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆಯುತ್ತಿರುವ ಮುಷ್ಕರದಲ್ಲಿ ಪಾಲ್ಗೊಂಡ ಪರಿಸರ ಹೋರಾಟಗಾರ ಕೆ.ಎನ್.ಸೋಮಶೇಖರ್ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಅವರು ವಿವಿಧೆಡೆ 25ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ದಿನಗೂಲಿ ನೌಕರರಿಗೆ ಸರ್ಕಾರ ಯಾವುದೇ ಸವಲತ್ತುಗಳನ್ನು ನೀಡದೆ ಅನ್ಯಾಯ ಮಾಡಿದೆ. 2009ರ ಆದೇಶದಂತೆ 10ವರ್ಷ ಸೇವೆ ಪೂರೈಸಿರುವ ದಿನಗೂಲಿ ನೌಕರರಿಗೆ ವಾರದ ರಜೆ, ಗುರುತಿನ ಚೀಟಿ, ಸಮವಸ್ತ್ರ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಈವರೆಗೂ ಸರ್ಕಾರ ಸ್ಪಂದಿಸದೆ ಇರುವುದು ನೋವಿನ ಸಂಗತಿಯಾಗಿದೆ ಎಂದು ತಿಳಿಸಿದರು. ಅರಣ್ಯ ಸಂಪತ್ತು ಮತ್ತು ಅರಣ್ಯವನ್ನು ಕಾಪಾಡುತ್ತಾ ಅರಣ್ಯದಲ್ಲಿರುವ ವನ್ಯಜೀವಿಗಳನ್ನು ರಕ್ಷಿಸುತ್ತಿರುವ ಇವರನ್ನು ಇಲಾಖೆಯ ಅಧಿಕಾರಿಗಳು ವಂಚಿಸುತ್ತಿರುವುದು ನೋವಿನ ಸಂಗತಿಯಾಗಿದೆ. ಇಲಾಖೆಯ ವಿವಿಧ ಶಾಖೆಗಳಲ್ಲಿ 25 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಇವರಿಗೆ ಕನಿಷ್ಠ ಕೂಲಿ ರೂ.300 ನಿಗದಿ ಮಾಡಿದ್ದರೂ 200 ರೂಗಳನ್ನು ಸಹ ನೀಡುತ್ತಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ದಿನಗೂಲಿ ನೌಕರರ ಸಂಘದ ಅಧ್ಯಕ್ಷ ರುದ್ರಯ್ಯ, ಉಪಾಧ್ಯಕ್ಷ ಕೆ.ವಿ.ಸೋಮಯ್ಯ. ಪ್ರಧಾನ ಕಾರ್ಯದರ್ಶಿ ಗಣೇಶ್, ಖಜಾಂಚಿ ಶಂಕರ್, ನೌಕರರಾದ ಕೇಶವಯ್ಯ, ರಾಮು, ಹೆಚ್.ಕೆ.ರಮೇಶ್, ಅಪ್ಪಣ್ಣ, ಡಿ.ಕೆ.ರವಿ. ಸಿ.ಸಿ.ಶಿವಯ್ಯ, ಗೋಪಾಲಶೆಟ್ಟಿ, ಮರಿಯಯ್ಯ, ಹೆಚ್.ಆರ್, ಹರೀಶ್, ಉಮಾಶಂಕರ್, ಮಹೇಶ್, ಗಾಯಿತ್ರಿ, ಸಾವಿತ್ರಮ್ಮ, ಮಂಜುಳ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: