ಕರ್ನಾಟಕಪ್ರಮುಖ ಸುದ್ದಿ

ಒವೈಸಿ ಜತೆ ಬಿಜೆಪಿ ಕೈ ಜೋಡಿಸಿದೆ ಎಂಬ ಕಾಂಗ್ರೆಸ್ ಹೇಳಿಕೆ ಈ ವರ್ಷದ ಜೋಕ್ : ಪ್ರಕಾಶ್ ಜಾವಡೇಕರ್ ವ್ಯಂಗ್ಯ

ರಾಜ್ಯ(ತುಮಕೂರು)ಫೆ.10:- ರಾಜ್ಯದಲ್ಲಿ ಒವೈಸಿ ಜತೆ ಬಿಜೆಪಿ ಕೈ ಜೋಡಿಸಿದೆ ಎಂಬ ಕಾಂಗ್ರೆಸ್ ಹೇಳಿಕೆ ಈ ವರ್ಷದ ಜೋಕ್ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಹಾಗೂ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ವ್ಯಂಗ್ಯವಾಡಿದರು.

ನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಒವೈಸಿಗೆ ಬೆಂಬಲ ನೀಡುತ್ತಿರುವುದು ಕಾಂಗ್ರೆಸ್ ಪಕ್ಷ. ಹೈದರಾಬಾದ್‌ನ ಕಾರ್ಪೋರೇಷನ್‌ನಲ್ಲಿ ಒವೈಸಿಯೊಂದಿಗೆ ಕಾಂಗ್ರೆಸ್ ಕೈಜೋಡಿಸಿದೆ. ಹೀಗಿರುವಾಗ ನಾವು ಒವೈಸಿಯೊಂದಿಗೆ ಇದ್ದೇವೆ ಎಂಬುದು ಹಾಸ್ಯಾಸ್ಪದ ಎಂದರು. ರಾಜ್ಯದಲ್ಲಿ ಅರಾಜಕತೆ ಹೆಚ್ಚಾಗಿದೆ. ಈ ಬಗ್ಗೆ ವಿಧಾನಮಂಡಲದಲ್ಲಿ ವಿಪಕ್ಷಗಳ ಆಕ್ಷೇಪಣೆಗಳಿಗೆ ಉತ್ತರ ನೀಡದ ಪರಿಸ್ಥಿತಿಯಲ್ಲಿ ಇಲ್ಲಿನ ಮುಖ್ಯಮಂತ್ರಿಗಳು ಇದ್ದಾರೆ ಎಂದು ದೂರಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಮಠಗಳು ಮತ್ತು ಅವು ನಡೆಸುವ ಶಿಕ್ಷಣ ಸಂಸ್ಥೆಗಳ ಮೇಲೆ ಹತೋಟಿ ಪಡೆಯಲು ಧಾರ್ಮಿಕ ದತ್ತಿ ಕಾಯ್ದೆಗೆ ತಿದ್ದುಪಡಿ ತರಲು ಹೋಗಿ ಜನರು ಮತ್ತು ಮಠಾಧೀಶರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಅದೇ ರೀತಿ ಮೈಸೂರಿಗೆ ನಮ್ಮ ಪಕ್ಷದ ಅಧ್ಯಕ್ಷರಾದ ಅಮಿತ್ ಷಾ ಬರುವ ವೇಳೆ ಮತ್ತು ಪ್ರಧಾನಿಮಂತ್ರಿಗಳು ಬೆಂಗಳೂರಿಗೆ ಆಗಮಿಸುವ ದಿನವೇ ಬಂದ್ ಮಾಡುವಂತೆ ಕನ್ನಡಪರ ಸಂಘಟನೆಗಳಿಗೆ ಪ್ರಚೋದನೆ ನೀಡಿ ರಾಜ್ಯ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ ಎಂದರು. ಸಂಸತ್ತಿನಲ್ಲಿ ಪ್ರಧಾನಿ  ನರೇಂದ್ರಮೋದಿ ಅವರು ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಭೂಕಂಪನದ ಪರಿಸ್ಥಿತಿ ಉಂಟಾಗಿದೆ. ಪ್ರಧಾನಿ ಭಾಷಣ ಮಾಡುವ ವೇಳೆ ತಡೆಯಲು ಯತ್ನ ನಡೆಸಿ ಪ್ರಧಾನಿಗೆ ಅಪಮಾನ ಮಾಡಿದ್ದಾರೆ. ಭಾರತದ ಸಂಸತ್ತಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಂಸತ್ತಿನಲ್ಲಿ ಪ್ರಧಾನಿಗಳ ಭಾಷಣಕ್ಕೆ ಕಾಂಗ್ರೆಸ್ ಸದಸ್ಯರು ಅಡ್ಡಿಪಡಿಸಿದ ಘಟನೆ ನಡೆದಿದೆ ಎಂದರು. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷ ನಡೆದುಕೊಂಡ ರೀತಿಯನ್ನು ಪ್ರಧಾನಿಗಳು ಸಂಸತ್ತಿನಲ್ಲಿ ಸವಿವರವಾಗಿ ವಿವರಿಸಿದ ನಂತರ ಕಾಂಗ್ರೆಸ್ಸಿಗರ ಬಣ್ಣ ಜನರ ಮುಂದೆ ಬಯಲಾಗಿದ್ದು, ಇದರಿಂದ ಕಾಂಗ್ರೆಸ್ಸಿಗರು ಭಯಗೊಂಡಿದ್ದಾರೆ ಎಂದರು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. 25 ಮಂದಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳು ಆಗಿವೆ. ಇವರಲ್ಲಿ ಇಬ್ಬರು ಬಿಜೆಪಿಯ ಪರಿಶಿಷ್ಠ ಜಾತಿಯವರು ಸೇರಿದ್ದಾರೆ. ಆದರೂ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ, ಕೊಲೆಗಾರರನ್ನು ಬಂಧಿಸುವಲ್ಲಿ ಮುಖ್ಯಮಂತ್ರಿಗಳು ವಿಫಲರಾಗಿದ್ದಾರೆ ಎಂದು  ದೂರಿದರು. ಸಾಹಿತಿ ಕಲ್ಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರ ಕೊಲೆಗಾರರನ್ನು ಬಂಧಿಸಲು ಇವರಿಂದ ಇನ್ನೂ ಸಾಧ್ಯವಾಗಿಲ್ಲ. ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕದಡಲು ಮೂಲ ಕಾರಣರಾದ ರಾಷ್ಟ್ರ ವಿರೋಧಿ ಸಂಘಟನೆಗಳಾದ ಪಿ.ಎಫ್.ಐ.ಮತ್ತು ಎಸ್.ಡಿ.ಪಿ.ಐ. ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಅವರ ಜತೆಯಲ್ಲಿ ಸಖ್ಯ ಬೆಳೆಸುವ ಮೂಲಕ ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೊಲೆಗಳು ಹೆಚ್ಚಾಗಲು ಈ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು. ಮಹಾರಾಷ್ಟ್ರ ಮತ್ತು ಉತ್ತರಪ್ರದೇಶಗಳಲ್ಲಿ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿನ ಸಾಲದ ಶೂಲದಿಂದ ರೈತರನ್ನು ಪಾರು ಮಾಡುವ ಸಲುವಾಗಿ ಆ ಸರ್ಕಾರಗಳೇ ಆ ಸಾಲವನ್ನು ಬ್ಯಾಂಕ್‌ಗಳಿಗೆ ಪಾವತಿಸಿವೆ. ಆದರೆ ಕರ್ನಾಟಕದ ಮುಖ್ಯಮಂತ್ರಿಯವರು ಮಾತ್ರ ಕೇಂದ್ರದತ್ತ ಬೆರಳು ತೋರಿಸುತ್ತಿದ್ದಾರೆ.ಇದು ರಾಜ್ಯದ ರೈತರ ಬಗ್ಗೆ ಇವರಿಗಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು. ಮಹದಾಯಿ ನದಿ ನೀರಿನ ವಿವಾದದ ಬಗ್ಗೆ ಪ್ರಸ್ತಾಪಿಸಿದ ಜಾವ್ಡೇಕರ್, ಈಗಾಗಲೇ ಗೋವಾ ಮುಖ್ಯಮಂತ್ರಿಯವರು ರಾಜ್ಯಕ್ಕೆ ಕುಡಿಯುವ ಸಲುವಾಗಿ ನೀರು ಬಿಡಲು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಅದಕ್ಕೆ ಅಡ್ಡಿಪಡಿಸುತ್ತಿರುವವರು ಆ ರಾಜ್ಯದಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್. ಹೀಗಿರುವಾಗ ಸಿದ್ಧರಾಮಯ್ಯ ಅವರು ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಮೂಲಕ ಆ ರಾಜ್ಯದ ಕಾಂಗ್ರೆಸ್ ನಾಯಕರ ಮನವೊಲಿಸಿ ನೀರು ಬಿಡುವಂತೆ ಮಾಡಲಿ. ಅದು ಬಿಟ್ಟು ಪ್ರಧಾನಿಗಳು ಮಧ್ಯಪ್ರವೇಶ ಮಾಡಬೇಕು ಎಂದು ಹೇಳುವುದು ಸರಿಯಲ್ಲ. ಬಿಜೆಪಿ ಮಾಡಬೇಕಾದ್ದನ್ನು ಮಾಡಿಯಾಗಿದೆ. ನೀರು ಬಿಡಲು ಗೋವಾ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಒಪ್ಪಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಹಾಗೂ  ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಪ್ರಹ್ಲಾದ್‌ ಜೋಶಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಜ್ಯೋತಿ ಗಣೇಶ್, ಹುಲಿನಾಯ್ಕರ್, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಸ್.ಶಿವಪ್ರಸಾದ್. ಶಾಸಕ ಸುರೇಶ್‍ಗೌಡ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: