ಮೈಸೂರು

ಮೋದಿ ನೇತೃತ್ವದ ಬಿ.ಜೆ.ಪಿ ಸರ್ಕಾರ ರೈತರ ಸಾಲ ಮನ್ನಾ ಮಾಡುವಲ್ಲಿ ಯೋಚಿಸದಿರುವುದು ದುರದೃಷ್ಟ : ಹೊಸೂರು ಕುಮಾರ್

ಮೈಸೂರು, ಫೆ.10:- ಕಾರ್ಪೊರೇಟ್ ಹಾಗೂ ಉದ್ಯಮಿಗಳಿಗೆ ಕೆಂಪು ಹಾಸುವ ಪ್ರಧಾನಿ ಮೋದಿ ದೇಶದ ಬೆನ್ನೆಲುಬಾದ ರೈತರನ್ನು ಹಾಗೂ ಯುವಜನತೆಯನ್ನು ಕಡೆಗಣಿಸಿರುವುದು ದುರಂತ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಹುಣಸೂರು ವರದಿಗಾರರ ಕೂಟದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಜೆಟ್‍ನಲ್ಲಿ ಕಾರ್ಪೊರೇಟ್ ವಲಯಗಳಿಗೆ ಬರಪುರ ಅವಕಾಶ ನೀಡಿದ ಮೋದಿ ನೇತೃತ್ವದ ಬಿ.ಜೆ.ಪಿ ಸರ್ಕಾರ ಯುವ ಜನತೆಗೆ ಉದ್ಯೊಗ್ಯ ಕಲ್ಪಿಸುವಲ್ಲಿ ಹಾಗೂ ರೈತರ ಸಾಲ ಮನ್ನಾ ಮಾಡುವಲ್ಲಿ ಯೋಚಿಸದಿರುವುದು ನಮ್ಮ ದುರದೃಷ್ಟ ಎಂದರು. ಕಾಲ ಕ್ರಮೇಣ ಮೋದಿ ಮ್ಯಾಜಿಕ್ ಠುಸ್ ಆಗುತ್ತಿದ್ದು ಮುಂದಿನ ಚುನಾವಣೆಯಲ್ಲಿ ಮೋದಿಯವರನ್ನು ಮನೆಗೆ ಕಳುಹಿಸುವ ಸಲುವಾಗಿ ಮೋದಿ ಹಠಾವೋ ದೇಶ್ ಬಚಾವೂ ಕಾರ್ಯಕ್ರಮವನ್ನು ನಮ್ಮ ರಾಜ್ಯ ರೈತ ಸಂಘದ ಮುಖಾಂತರ ನಡೆಸಲಾಗುವುದೆಂದರು.

ಮೈಸೂರು ಜಿಲ್ಲಾ ಸಂಸದ ಪ್ರತಾಪ್ ಸಿಂಹ ಪ್ರಾರಂಭದಲ್ಲಿ ರೈತರ ಬಗ್ಗೆ ಭಾಷಣ ಮಾಡುತ್ತ ಹೊಗೆ ಸೊಪ್ಪಿಗೆ ನ್ಯಾಯ ಬೆಲೆ ಸಿಗುವವರೆಗೆ ಪ್ರತಿಷ್ಠಿತ ಐ.ಟಿ.ಸಿ ಕಂಪನಿ ವಿರುದ್ಧ ಹೋರಾಟ ಮಾಡುತ್ತೇನೆ ಎಂದವರು ರಾತ್ರೋ ರಾತ್ರಿ ಕಂಪನಿಯೊಂದಿಗೆ ಶಾಮಿಲಾಗಿ ಹೊಗ್ಗೆಸೊಪ್ಪು ರೈತರನ್ನು ನೇಣಿಗೆರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದತ್ತು ಪಡೆದ ಒಂದು ಗ್ರಾಮವನ್ನುಆದರ್ಶ ಮಾಡದ ಸಂಸದರ ಯೋಗ್ಯತೆ ಜನತೆಗೆ ತಿಳಿದಿದೆ ಎಂದರು. ಧರ್ಮದ ಆಧಾರದಲ್ಲಿ ರಾಜಕೀಯ ಮಾಡುತ್ತಿರುವ ಸಂಸದ ಪ್ರತಾಪ್ ಕೋಮು ಸೌಹರ್ದತೆಗೆ ಧಕ್ಕೆ ತರುವುದನ್ನು ಬಿಟ್ಟು ರೈತರ ಸಮಸ್ಯೆ ಬಗೆಹರಿಸಲಿ ಇಲ್ಲ ರಾಜೀನಾಮೆ ನೀಡಿ ಮನೆಗೆ ನಡೆಯಲಿ ಎಂದು ಆಗ್ರಹಿಸಿದರು.

ತಂಬಾಕು ಮಂಡಳಿಗಳು ರೈತರ ಹಿತ ಕಾಪಾಡುವ ಬದಲು ಹೊಗೆ ಸೊಪ್ಪು ಖರೀದಿದಾರ ಕಂಪನಿಪರ ಕೆಲಸ ಮಾಡುತ್ತ ಕಮೀಷನ್ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದು, ಐ.ಟಿ.ಸಿ ಪರ ಲಾಭಿ ಮಾಡುತ್ತ ಬೇರೆ ಯಾವೊಂದು ಖರೀದಿ ಕಂಪನಿಗಳಿಗೆ ಹೊಗೆ ಸೊಪ್ಪು ಖರೀದಿಗೆ ಅವಕಾಶ ನೀಡದೆ ರೈತರಿಗೆ ವಂಚಿಸುತ್ತಿದ್ದರೂ ಸಂಸದರಾಗಲಿ ಪ್ರಧಾನಿಯಾಗಲಿ ಮಂಡಳಿಗೆ ಸೂಕ್ತ ಅಧಿಕಾರಿಗಳನ್ನು ನೇಮಿಸದೆ ರೈತರ ಬದುಕಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಎಂದು ದೂರಿದ ಅವರು ಸಂಸದರು ಮುಂದಿನ ಬಾರಿ ಹೊಗೆಸೊಪ್ಪಿಗೆ ಸೂಕ್ತ ಬೆಲೆ ಕೊಡಿಸದ್ದಿದರೆ ನಿವಾಸದ ಮುಂದೆ ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಬೆಂಕಿಪುರ ಚಿಕ್ಕಣ, ಕಾರ್ಯದರ್ಶಿ ಅಸ್ವಾಳು ಶಂಕರೇಗೌಡ, ಮಹಿಳಾ ಅಧ್ಯಕ್ಷೆ ನೇತ್ರಾವತಿ ಮುಖಂಡರಾದ ಹಳೆಪುರ ರಾಮಕೃಷ್ಣ ರಾಮೇಗೌಡ, ಬಸವರಾಜೇಗೌಡ, ಮಹದೇವು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: