
ಮೈಸೂರು
ನೋಟು ಸಾಗಾಣೆಗೆ ವಿಮಾನ ಬಳಕೆ
ಮೈಸೂರಿನ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಘಟಕದಿಂದ ಮುದ್ರಣಗೊಳ್ಳುವ 2000 ರೂ. ಮುಖಬೆಲೆಯ ನೋಟು ಸಾಗಾಣಿಕೆಗೆ ವಿಮಾನ ಬಳಸಲು ತೀರ್ಮಾನಿಸಲಾಗಿದೆ ಎಂದು ಆರ್.ಬಿ.ಐ.ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಲ್ಲಿ ದಿಢೀರನೆ 500 ಮತ್ತು 1000ರೂ. ಹಳೆ ನೋಟುಗಳನ್ನ ರದ್ದುಗೊಳಿಸಿರುವುದರಿಂದ ಉಂಟಾಗಿರುವ ನೋಟು ಸಮಸ್ಯೆಯನ್ನು ಬಗೆಹರಿಸಲು 2000ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿದ್ದು ಈ 2000ರೂ. ಮುಖಬೆಲೆಯ ನೋಟುಗಳು ಮೈಸೂರಿನ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಘಟಕ ಹಾಗೂ ಪಶ್ಚಿಮ ಬಂಗಾಳದ ಸೆಲ್ ಬೋನಿಯಾದಲ್ಲಿ ಮಾತ್ರ ಮುದ್ರಣಗೊಳುತ್ತಿದ್ದು ಇದನ್ನು ಸಾಗಣೆ ಮಾಡಲು ರೈಲು ಮತ್ತು ರಸ್ತೆಯ ಮೂಲಕ ಬಹಳ ಸಮಯ ಹಿಡಿಯುತ್ತಿದೆ.
ಇದರಿಂದ ಈಗ ಉಂಟಾಗಿರುವ ನೋಟು ಸಮಸ್ಯೆಯನ್ನು ಬಗೆಹರಿಸಲು ಕಷ್ಟವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯವೂ ಮೈಸೂರಿನ ವಿಮಾನ ನಿಲ್ದಾಣವನ್ನು ಬಳಸಿಕೊಳ್ಳಲು ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಿಂದ ಅನುಮತಿ ಪಡೆದು ನೋಟುಗಳನ್ನು ವಿಮಾನ ಮೂಲಕ ಸಾಗಾಣೆ ಮಾಡುವಂತೆ ಮೈಸೂರಿನ ಆರ್ ಬಿಐ ಗೆ ಸೂಚನೆ ನೀಡಿದೆ.
ಈ ಬಗ್ಗೆ ಆರ್ ಬಿಐ ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾವನ್ನು ಸಂಪರ್ಕಿಸಿದ್ದು ನೋಟು ಸಾಗಾಣೆಗೆ ಮೈಸೂರು ವಿಮಾನ ನಿಲ್ದಾಣವನ್ನು ಬಳಸಿಕೊಳ್ಳಲು ಕೇಳಿದೆ. ಈ ಬಗ್ಗೆ ಎಲ್ಲಾ ಪ್ರಕ್ರಿಯೆಗಳು ಮುಗಿದಿದ್ದು ಶೀಘ್ರವೇ ವಿಮಾನದ ಮೂಲಕ ಹೊಸ ನೋಟುಗಳನ್ನು ದೇಶದ ಎಲ್ಲಾ ಭಾಗಗಳಿಗೂ ಸಾಗಾಣೆ ಮಾಡಲಾಗುವುದು ಎಂದು ಆರ್ ಬಿಐನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.