ಕರ್ನಾಟಕ

ಚಿಕಿತ್ಸಾ ವೆಚ್ಚಕ್ಕೆ ಹೆದರಿ ರೋಗಿಗಳು ಚಿಕಿತ್ಸೆಗೆ ಒಳಗಾಗುತ್ತಿಲ್ಲ : ಅನಂತ್ ಪೈ ಬೇಸರ

ರಾಜ್ಯ(ಮಡಿಕೇರಿ) ಫೆ.11 :- ಇತ್ತೀಚಿನ ದಿನಗಳಲ್ಲಿ ದುಬಾರಿ ಚಿಕಿತ್ಸಾ ವೆಚ್ಚಕ್ಕೆ ಹೆದರಿ ರೋಗಿಗಳು ತಮ್ಮ ರೋಗಕ್ಕೆ ಚಿಕಿತ್ಸೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಸರಕಾರ ಬಡ ವರ್ಗದ ರೋಗಿಗಳಿಗೆ ಸಹಕಾರಿಯಾಗಿ ಚಿಕಿತ್ಸಾ ವೆಚ್ಚವನ್ನು ಭರಿಸುವ ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮಂಗಳೂರು ಯುನಿಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಂತ್ ಪೈ ಸಲಹೆ ನೀಡಿದ್ದಾರೆ.

ಮಡಿಕೇರಿ ಲಯನ್ಸ್ ಕ್ಲಬ್ ಹಾಗೂ ಮಂಗಳೂರು ಯುನಿಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ನಗರದ ಲಯನ್ಸ್ ಕ್ಲಬ್‍ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಈ ಸಂದರ್ಭ ಮಾತನಾಡಿದ ಅವರು ಸರ್ಕಾರ ಉತ್ತಮ ಆರೋಗ್ಯ ಮತ್ತು ಚಿಕಿತ್ಸೆಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅಷ್ಟೇ ಅಲ್ಲದೆ ಬಿಪಿಎಲ್, ಯಶಸ್ವಿನಿ ಕಾರ್ಡ್‍ಗಳನ್ನು ಹೊಂದಿರುವವರ ಚಿಕಿತ್ಸೆಗೆಂದು ಕೋಟಿ ಕೋಟಿ ಹಣ ವ್ಯಯಿಸುತ್ತಿದೆ. ಆ ಯೋಜನೆಗಳ ಉಪಯೋಗವನ್ನು ಪಡೆದುಕೊಂಡು ಉತ್ತಮ ಆರೋಗ್ಯವನ್ನು ಹೊಂದಬೇಕು ಎಂದರು. ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಬೊಳ್ಳಪ್ಪ ನಮ್ಮ ಆರೋಗ್ಯದ ಬಗ್ಗೆ ನಾವುಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ಉತ್ತಮ ಆರೋಗ್ಯವಿದ್ದಲ್ಲಿ ಏನನ್ನೂ ಬೇಕಾದರೂ ಸಾಧಿಸಬಹುದು. ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಂತಹ ಶಿಬಿರದ ಪ್ರಯೋಜನವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಂಗಳೂರು ಯುನಿಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ. ಸಯ್ಯದ್ ಮಹಮ್ಮದ್ ಹೃದಯವನ್ನು ಹೇಗೆ ಉತ್ತಮವಾಗಿಟ್ಟುಕೊಳ್ಳಬೇಕು, ಹೃದಯಕ್ಕೆ ಸಂಬಂಧಿಸಿದಂತೆ ಎದುರಾಗುವ ತೊಂದರೆಗಳು ಯಾವುದು ಮತ್ತು ಅವುಗಳನ್ನು ಹೇಗೆ ಎದುರಿಸಿ ಜೀವನ ನಡೆಸಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿದರು.

ನುರಿತ ಹೃದ್ರೋಗ ತಜ್ಞರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಶಿಬಿರದಲ್ಲಿ ಎದೆನೋವು, ಸ್ಥೂಲ ಕಾಯತೆ, ಅತಿಯಾದ ರಕ್ತದೊತ್ತಡ, ಮಧುಮೇಹ, ಹೃದ್ರೋಗ ಸಮಸ್ಯೆ ಮೊದಲಾದ ಪರೀಕ್ಷೆಗಳನ್ನು ನಡೆಸಲಾಯಿತು. ಸುಮಾರು 70ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.

ಶಿಬಿರದಲ್ಲಿ ಲಯನ್ಸ್ ಟ್ರಸ್ಟ್ ಅಧ್ಯಕ್ಷ ಅಂಬೆಕಲ್ ನವೀನ್, ಲಯನೆಸ್ ಅಧ್ಯಕ್ಷರಾದ ಕವಿತಾ ಬೊಳ್ಳಪ್ಪ, ಕಾರ್ಯದರ್ಶಿ ಮಧುಕರ್ ಮತ್ತಿತರರು ಹಾಜರಿದ್ದರು.    (ಕೆಸಿಐ,ಎಸ್.ಎಚ್)

Leave a Reply

comments

Related Articles

error: