
ಮೈಸೂರು
ಹಿರಿಯ ನಾಗರಿಕರಿಗೆ ಸನ್ಮಾನ ಹೆಸರಲ್ಲಿ ಮತದಾರರಿಗೆ ಬಾಡೂಟ..!?
ಮೈಸೂರು,ಫೆ.12:- 2018 ರ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಗಮನ ತಮ್ಮತ್ತ ಸೆಳೆಯಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ ಮೈಸೂರಿನಲ್ಲಿ ಮೈಸೂರು ಜೆಡಿಎಸ್ ನ ಕೆಲವು ಪ್ರಮುಖರು ಮತದಾರರು, ಮುಖಂಡರಿಗೆ ಭರ್ಜರಿ ಬಾಡೂಟ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಮೈಸೂರಿನ ಆಲಮ್ಮ ಛತ್ರದಲ್ಲಿ ಚಾಮರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರೊ.ಕೆ.ಎಸ್.ರಂಗಪ್ಪ ಭಾನುವಾರದ ಬಾಡೂಟ ನಡೆಸಿಕೊಟ್ಟಿದ್ದಾರೆ. ಮಟನ್ ಕುರ್ಮಾ, ಮಟನ್ ಚಾಪ್ಸ್, ಚಿಕನ್ ಚಾಪ್ಸ್, ಚಿಕನ್ ಕಬಾಬ್, ಕೀರು ಸೇರಿದಂತೆ ವಿವಿಧ ಭಕ್ಷಗಳನ್ನು ಮತದಾರರಿಗೆ ಉಣಬಡಿಸಲಾಗಿದೆ. ಹಿರಿಯ ನಾಗರಿಕರಿಗೆ ಸನ್ಮಾನ ಮತ್ತು ವಾರ್ಡ್ ಸಭೆ ಹೆಸರಿನಲ್ಲಿ ಮತದಾರರನ್ನು ಸೆಳೆಯಲು ಆಮಿಷ ನಡೆಸಲಾಗಿದ್ದು, ಸುಮಾರು 1000 ಮಂದಿಗೆ ಬಾಡೂಟ ಹಾಕಲಾಗಿದೆ ಎಂಬ ಮಾತು ಕೇಳಿ ಬಂದಿದೆ.
ಈ ಕುರಿತು ಮಾಜಿ ಮೇಯರ್ ಎಂ.ಜೆ.ರವಿಕುಮಾರ್ ಮಾತನಾಡಿ ನಾನು ಮೈಸೂರು ಮಹಾನಗರ ಪಾಲಿಕೆ ಮೇಯರ್ ಆಗಿದ್ದೆ. ಅಧಿಕಾರವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ನನ್ನ ವಾರ್ಡಿನ ಜನರಿಗೆ “ಗೆಟ್ ಟು ಗೆದರ್” ಕೊಡಿಸಿದ್ದೇನೆ. ಹಿರಿಯ ನಾಗರಿಕರಿಗೆ ಸನ್ಮಾನ ಮಾಡಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದಿದ್ದಾರೆ.
ಚಾಮರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ ಮಾಜಿ ಮೇಯರ್ ರವಿ ಕುಮಾರ್ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಅತಿಥಿಯಾಗಿ ಆಗಮಿಸುವಂತೆ ಕೇಳಿದ್ದರು, ಬಂದಿದ್ದೇನೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದಿದ್ದಾರೆ. ಜೆಡಿಎಸ್ ಚಾಮರಾಜ ಕ್ಷೇತ್ರದಲ್ಲಿ ಚೆನ್ನಾಗಿದೆ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶೈಲೇಂದ್ರ, ಬಾಲು, ಲಿಂಗಪ್ಪ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)