ಕರ್ನಾಟಕದೇಶಪ್ರಮುಖ ಸುದ್ದಿ

ಕರ್ನಾಟಕ ಸಂಗೀತದ ಮೇರು ಗಾಯಕ ಬಾಲಮುರಳಿಕೃಷ್ಣ ವಿಧಿವಶ

ಚೆನ್ನೈ: ಕರ್ನಾಟಕ ಶಾಸ್ತ್ರೀಯ ಸಂಗೀತದ ಮೇರು ಗಾಯಕ ಬಾಲಮುರಳಿಕೃಷ್ಣ ಅವರು ಇಂದು (ನ.22) ಚೆನ್ನೈನಲ್ಲಿ ವಿಧಿವಶರಾಗಿದ್ದಾರೆ. ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಅವರಿಗೆ 84 ವರ್ಷ ವಯಸ್ಸಾಗಿತ್ತು.

1991ರಲ್ಲಿ ಅಂದರೆ 25 ವರ್ಷಗಳಷ್ಟು ಹಿಂದೆಯೇ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದರು. 2005ರಲ್ಲಿ ಪ್ರತಿಷ್ಠಿತ ಫ್ರೆಂಚ್ ಸರ್ಕಾರದ “ಚೆವಲೀರ್ ಆಫ್ ದ ಆರ್ಡ್ರೆ ಡೆಸ್ ಆರ್ಟ್ಸ್ ಎಟ್ ಡೆಸ್ ಲೆಟೆರ್ಸ್” ಗೌರವವನ್ನೂ ಅವರು ಅಲಂಕರಿಸಿದ್ದರು.

ಅವರ ಮೂಲಸ್ಥಳ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲಯ ಶಂಕರಗುಪ್ತಂ. ಮುರಳಿ ಕೃಷ್ಣ ಎನ್ನುವುದು ಅವರ ಮೊದಲಿನ ಹೆಸರಾಗಿತ್ತು. 8 ವರ್ಷದ ಮುರಳಿ ಕೃಷ್ಣ ಅವರು ವಿಜಯವಾಡದಲ್ಲಿ ಮೊದಲ ಬಾರಿಗೆ ನೀಡಿದ ಗಾಯನ ಕಾರ್ಯಕ್ರಮವನ್ನು ವೀಕ್ಷಿಸಿದ ಅಂದಿನ ಹೆಸರಾಂತ ಹರಿಕಥಾ ವಿದ್ವಾಂಸರಾದ ಮುಸುನುರಿ ಸೂರ್ಯನಾರಾಯಣ ಮೂರ್ತಿ ಭಾಗವತರ್ ಅವರು ಬಾಲಮುರಳಿಕೃಷ್ಣ ಎಂದು ನಾಮಕರಣ ಮಾಡಿದ್ದರು. ನಂತರ ಅದೇ ಹೆಸರಿನಿಂದ ಎಲ್ಲರೂ ಕರೆಯುವಂತಾಯಿತು.

ಬಾಲಮುರಳಿ ಕೃಷ್ಣ ಅವರು ಆಗಾಗ ಈ ಘಟನೆಯನ್ನು ನೆನಪಿಸಿಕೊಂಡು ನನ್ನ ಹೆಸರಿನ ಜೊತೆ ಸೇರಿದ ಈ ಬಾಲ ಎನ್ನುವ ಪದ ನಾನು ಎಂದಿಗೂ ಬಾಲಕ ಅರ್ಥಾತ್ ವಿದ್ಯಾರ್ಥಿಯಾಗಿರಬೇಕು, ಕಲಿಯುತ್ತಿರಬೇಕು ಎಂಬುದನ್ನು ನೆನಪಿಸುತ್ತಿರುತ್ತದೆ ಎನ್ನುತ್ತಿದ್ದರು.

ಸಂಗೀತ ಲೋಕದ ಬಹುಮುಖ ಪ್ರತಿಭೆ…

ಗಾಯನ ಮಾತ್ರವಲ್ಲದೆ ತಾಳ ವಾದ್ಯದ ತ್ರಿಮುಖಿ, ಪಂಚಮುಖಿ, ಸಪ್ತಮುಖಿ ಮತ್ತು ನವಮುಖಿ ಪ್ರಕಾರಗಳನ್ನು ಸ್ವತಃ ಆವಿಷ್ಕರಿಸಿದ್ದರು. ಗಾಯನದ ಜೊತೆ ವಯೊಲಿನ್, ಮೃದಂಗ, ಖಂಜಿರಾ ಪ್ರಯೋಗದಲ್ಲೂ ಅವರು ಪ್ರವೀಣರಾಗಿದ್ದರು.

ಕನ್ನಡದ ಸಂಧ್ಯಾರಾಗ, ಹಂಸಗೀತೆ, ಸುಬ್ಬಾಶಾಸ್ತ್ರೀ, ಶ್ರೀಪುರಂದರದಾಸರು, ಅಮ್ಮ, ಗಾನಯೋಗಿ ರಾಮಣ್ಣ, ಚಿನ್ನಾರಿಮುತ್ತಾ, ಮೊದಲಾದ ಚಿತ್ರಗಳಲ್ಲಿ ಹಾಡಿದ್ದರು. “ಮುತ್ತಿನಹಾರ ಚಿತ್ರದ ದೇವರು ಹೊಸೆದಾ ಪ್ರೇಮದ ದಾರ..’ ಗೀತೆ ಇವರ ಕಂಚಿನ ಕಂಠದಲ್ಲಿ ಮನೋಜ್ಞವಾಗಿ ಮೂಡಿ ಬಂದಿತ್ತು. ನಟರಾಗಿಯೂ ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. 1967ರಲ್ಲಿ ಭಕ್ತಪ್ರಹ್ಲಾದ ಚಿತ್ರದಲ್ಲಿ ನಾರದನ ಪಾತ್ರ ನಿರ್ವಹಿಸಿದ್ದರು.

ಕನ್ನಡ, ತೆಲುಗು, ಸಂಸ್ಕೃತ, ತಮಿಳು ಸೇರಿದಂತೆ ಬಹು ಭಾಷೆಗಳ ಗಾಯಕರಾಗಿದ್ದು, ಜಗತ್ತಿನಾದ್ಯಂತ ಸಹಸ್ರಾರು ಸಂಗೀತ ಶ್ರೋತೃಗಳ ಅಭಿಮಾನಕ್ಕೆ ಭಾಜನರಾಗಿದ್ದರು. 2010ರಲ್ಲಿ ಮೂಡಬಿದ್ರೆಯಲ್ಲಿ ಜರುಗಿದ  ಆಳ್ವಾಸ್ ವಿರಾಸತ್ ನಲ್ಲಿ ಪಾಲ್ಗೊಂಡಿದ್ದರು.

ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಸಂಗೀತ ಲೋಕ ಮತ್ತು ಅವರ ಶಿಷ್ಯ ವೃಂದ ಕಂಬನಿ ಮಿಡಿದಿದೆ.

Leave a Reply

comments

Related Articles

error: