ಮೈಸೂರು

ಕೇಳುಗರನ್ನು ಸಂಗೀತ ಲೋಕದಲ್ಲಿ ತೇಲುವಂತೆ ಮಾಡಿದ ‘ಪೂರ್ವಿರಾಗ’

ಮೈಸೂರು,ಫೆ.12-`ಹಾಡು ಹಳೆಯದಾದರೇನು ಭಾವ ನವನವೀನ’ ಎಂಬಂತೆ ಕನ್ನಡ ಚಿತ್ರರಂಗದ ಅನೇಕ ಯುಗಳ ಗೀತೆಗಳು ಕೇಳುಗರನ್ನು ಸಂಗೀತ ಲೋಕದಲ್ಲಿ ತೇಲುವಂತೆ ಮಾಡಿತ್ತು.

ಕಾಮಿನಿ ಕೇರ್ಸ್ ಎಜುಕೇಷನ್ ಟ್ರಸ್ಟ್, ಜಸ್ಟ್ ಇವೆಂಟ್ 365 ಸಹಯೋಗದೊಂದಿಗೆ ಭಾನುವಾರ ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ `ಪೂರ್ವಿರಾಗ’ 60 ರಿಂದ 80ರ ದಶಕದ ಸಿನಿಮಾ ಹಾಡುಗಳ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಹೆಸರಾಂತ ಗಾಯಕರು ಸುಮಧುರ ಗೀತೆಗಳ ಮೂಲಕ ಸಂಗೀತ ಪ್ರಿಯರಿಗೆ ಮುದ ನೀಡಿದರು, ಹಳೆಯ ಹಾಡುಗಳಲ್ಲಿನ ಸಾಹಿತ್ಯವೇ ಹಾಗೇ. ಆ ಗೀತೆಗಳು ಎಲ್ಲ ಕಾಲದಲ್ಲೂ ಹಿರಿಯರಿಂದ ಹಿಡಿದು ಕಿರಿಯರವರೆಗೂ ಮೆಚ್ಚುವಂತದ್ದು, ಗುನುಗುವಂತದ್ದು ಎಂಬುದನ್ನು ಸಾಬೀತು ಪಡಿಸಿದರು.

ಮೊದಲಿಗೆ ಖ್ಯಾತ ಗಾಯಕಿ ಮಂಜುಳಾ ಗುರುರಾಜ್ `ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ’ ಎಂಬ ಹಾಡನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದರು. ನಂತರ `ಮೂಡಲ ಮನೆಯ ಮುತ್ತಿನ ನೀರಿನ’, `ಹೃದಯದಲಿ ಇದೇನಿದು ನದಿಯೊಂದು ಓಡಿದೆ’, `ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು’ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರನ್ನು ರಂಜಿಸಿದರು.

ಬಳಿಕ ಗಾಯಕಿ ಬಿ.ಆರ್.ಛಾಯಾ `ಸೇವಂತಿಗೆ ಚಂಡಿ ನಂತ ಮುದ್ದುಕೋಳಿ’, `ಹಿಂದೂಸ್ತಾನವು ಎಂದು ಮರೆಯದ ಭಾರತ ರತ್ನವೂ ನೀನಾಗು’, `ಬೆಳ್ಳಿರಥದಲಿ ಸೂರ್ಯ ತಂದ ಕಿರಣ’, ಛಾಯಾ ಹಾಗೂ ಗಾಯಕ ಶ್ರೀನಿವಾಸ ಮೂರ್ತಿ `ನಿನ್ನಂತ ಅಪ್ಪ ಇಲ್ಲ. ನಿನ್ನಂತ ಮಗಳು ಇಲ್ಲ’ ಗೀತೆ ಹಾಡಿದರೆ, ಗಾಯಕಿ ಜೋಗಿ ಸುನೀತಾ `ಚೆಲುವಾಂತ ಚೆನ್ನಿಗನೆ ನಲಿದಾಡು ಬಾ’, ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ, `ಎಲ್ಲೋ ಜೋಗಪ್ಪ ನಿನ್ನ ಅರಮನೆ’, ಗಾಯಕ ಶ್ರೀನಿವಾಸ್ ಮೂರ್ತಿ `ಕರುನಾಡ ತಾಯಿ ಸದಾ ಚಿನ್ಮಯಿ’, ಸಂತೋಷ ಅಹಾ ಅಹಾ. ಸಂಗೀತ ಓಹೋ, ಓಹೋ, ಗಾಯಕ ಶ್ರೀ ಹರ್ಷ `ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು’, `ಬೆಳ್ಳಿ ಮೂಡಿತ್ತೋ ಕೋಳಿ ಕೂಗಿತ್ತೋ’ ಸೇರಿದಂತೆ ಅನೇಕ ಗೀತೆಗಳನ್ನು ಹಾಡಿದರು.

ಇನ್ನೂ ಕಾರ್ಯಕ್ರಮದ ಕೊನೆಯಲ್ಲಿ ಬೆಳ್ಳಿ ಮೂಡಿತೋ ಕೋಳಿ ಕೂಗಿತೋ, ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು, ಶ್ರೀಹರ್ಷ ಹಾಗೂ ಶ್ರೀನಿವಾಸ ಮೂರ್ತಿ ಅವರು ಹಾಡಿದ ‘ಸಂತೋಷಕ್ಕೆ ಹಾಡು ಸಂತೋಷಕ್ಕೆ’ ಹಾಡುಗಳಿಗಂತು ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.

ನಿರೂಪಕಿ ಅಪರ್ಣಾ ಕಾರ್ಯಕ್ರಮವನ್ನು ನಿರೂಪಿಸಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಇಹಲೋಕ ತ್ಯಜಿಸಿದ ನಟ ಚಂದ್ರಶೇಖರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. (ವರದಿ-ಎಂ.ಎನ್)

Leave a Reply

comments

Related Articles

error: