
ದೇಶಪ್ರಮುಖ ಸುದ್ದಿ
ಈ ದೇವಾಲಯದಲ್ಲಿ ಹೆಲ್ಮೆಟ್ ಇದ್ದರಷ್ಟೇ ದ್ವಿಚಕ್ರ ವಾಹನಕ್ಕೆ ಪೂಜೆ.!
ಪರದೀಪ್,ಫೆ.12-ಸಂಚಾರ ನಿಯಮಗಳನ್ನು ಪಾಲಿಸುವಂತೆ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವಂತೆ ಸಂಚಾರ ಪೊಲೀಸರು, ಅನೇಕ ಸಂಘ-ಸಂಸ್ಥೆಗಳವರು ಜಾಗೃತಿ ಮೂಡಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇಲ್ಲಿ ವಿಶೇಷ ಏನಪ್ಪ ಅಂದ್ರೆ, ದೇವಸ್ಥಾನವೊಂದರಲ್ಲಿ ಹೆಲ್ಮಟ್ ಕುರಿತು ಅರಿವು ಮೂಡಿಸಲಾಗುತ್ತಿದೆ.
ಹೌದು, ದ್ವಿಚಕ್ರ ವಾಹನಗಳಿಗೆ ಪೂಜೆ ಮಾಡಿಸಬೇಕಾದರೆ ಸವಾರ ಹೆಲ್ಮೆಟ್ ಧರಿಸಿರಬೇಕು. ಹೆಲ್ಮೆಟ್ ಧರಿಸದಿದ್ದರೆ ವಾಹನಕ್ಕೆ ಪೂಜೆ ಮಾಡುವುದಿಲ್ಲ. ಒಡಿಶಾದ ಜಗತ್ಸಿಂಗ್ಪುರ ಜಿಲ್ಲೆಯ ಮಾ ಸರಳಾ ದೇವಸ್ಥಾನದ ಆಡಳಿತ ಮಂಡಳಿಯವರು ಪೊಲೀಸರ ಸೂಚನೆಯಂತೆ `ಹೆಲ್ಮೆಟ್ ಧರಿಸದಿದ್ದರೆ ಪೂಜೆ ಇಲ್ಲ’ ಎಂಬ ನಿಯಮಾವಳಿ ಜಾರಿಗೆ ತಂದಿದೆ. ಅದರಂತೆ ವಾಹನ ಪೂಜೆ ಮಾಡಿಸುವವರು ಹೆಲ್ಮೆಟ್ ಧರಿಸಿರಲೇ ಬೇಕು.
ರಸ್ತೆ ಅಪಘಾತಗಳಲ್ಲಿ ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಸವಾರರು ಸಾವಿಗೀಡಾಗುವುದನ್ನು ತಪ್ಪಿಸಲು ಪೊಲೀಸ್ ಇಲಾಖೆ ರಾಜ್ಯಾದ್ಯಂತ ಎಲ್ಲ ದೇವಸ್ಥಾನಗಳ ಆಡಳಿತ ಮಂಡಳಿಗಳನ್ನು ಸಂಪರ್ಕಿಸಿ ಈ ಮನವಿ ಮಾಡುತ್ತಿದೆ. ಇದಕ್ಕೆ ಬಹುತೇಕ ದೇವಾಲಯಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಜೈನಾರಾಯಣ್ ಪಂಕಜ್ ತಿಳಿಸಿದ್ದಾರೆ.
ಪರದೀಪ್ ಸಮೀಪದ ಝಾಂಕಡ್ನಲ್ಲಿರುವ ಮಾ ಸರಳಾ ದೇವಸ್ಥಾನ ದ್ವಿಚಕ್ರ ವಾಹನ ಪೂಜೆಗೆ ಹೆಸರುವಾಸಿ. ಈ ಭಾಗದ ಯಾರೇ ದ್ವಿಚಕ್ರ ವಾಹನ ಖರೀದಿಸಿದರೂ ಇಲ್ಲೇ ಪೂಜೆ ಮಾಡಿಸುತ್ತಾರೆ. ಖರೀದಿ ದಿನದಿಂದಲೇ ಹೆಲ್ಮೆಟ್ ಕಡ್ಡಾಯವಾಗಿ ಬಳಸುವಂತೆ ಮಾಡಲು ಈ ಕ್ರಮ ಎಂದು ಅವರು ಹೇಳಿದ್ದಾರೆ. (ವರದಿ-ಎಂ.ಎನ್)