
ಮೈಸೂರು
ರೇಷ್ಮೆ ಕೃಷಿಕರಿಗೆ ಇನ್ನಷ್ಟು ಮಾರ್ಗದರ್ಶನ ಅಗತ್ಯ: ಬಿ.ಎ.ಪ್ರಕಾಶ್
ಬೈಲಕುಪ್ಪೆ: ಇಲಾಖೆಯ ಅಧಿಕಾರಿಗಳ ಕೊರತೆಯಿಂದ ಆಸಕ್ತ ರೈತರಿಗೆ ಸರಿಯಾದ ರೀತಿಯಲ್ಲಿ ಮಾಹಿತಿ ದೊರೆಯದಂತಾಗಿದೆ ಎಂದು ರೇಷ್ಮೆ ಕೃಷಿ ಪ್ರಗತಿಪರ ರೈತ ಬಿ.ಎ. ಪ್ರಕಾಶ್ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ರೇಷ್ಮೆ ಇಲಾಖೆಯಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದ್ದು 25 ಮಂದಿ ಇರಬೇಕಾದ ಜಾಗದಲ್ಲಿ ಕೇವಲ 11 ಮಂದಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿರುವುದು ದುರದೃಷ್ಟಕರ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ತಂಬಾಕನ್ನು ಕೈಬಿಟ್ಟು ಪರ್ಯಾಯ ಬೆಳೆಯಾಗಿ ರೇಷ್ಮೆ ಕೃಷಿಯ ಕಡೆ ರೈತರು ಮುಖ ಮಾಡುತ್ತಿರುವ ಸಂದರ್ಭದಲ್ಲಿ ಸರ್ಕಾರ ಈ ರೀತಿ ನಿರ್ಲಕ್ಷ ವಹಿಸುತ್ತಿರುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.
ದೊಡ್ಡಹೊಸೂರು ಗ್ರಾಮದ ರೈತ ಶಶಿ, ಹಿಟ್ಟನೆಹೆಬ್ಬಾಗಿಲು ಗ್ರಾಮದ ಕೃಷ್ಣೇಗೌಡ ಸೇರಿದಂತೆ ತಾಲೂಕಿನಲ್ಲಿ ಹಲವಾರು ರೈತರು ರೇಷ್ಮೆ ಕೃಷಿಯನ್ನು ಅವಲಂಬಿಸಿದ್ದು ತಮ್ಮ ಜೀವನದ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಆದರೆ ತಾವು ಮಾತ್ರ ಕಳೆದ 10 ವರ್ಷಗಳಿಂದ ಕೇಂದ್ರೀಯ ಬೀಜೋತ್ಪನ್ನ ಕೇಂದ್ರಕ್ಕಾಗಿ ರೇಷ್ಮೆ ಕೃಷಿ ಮಾಡುತ್ತಿದ್ದು ಸಕಾಲಕ್ಕೆ ಅಗತ್ಯ ಔಷಧಿ ಸೇರಿದಂತೆ ಇನ್ನಿತರ ಉಪಕರಣಗಳು ಸರಿಯಾದ ರೀತಿ ದೊರೆಯದೆ ಮಾಹಿತಿ ಇಲ್ಲದ ಕಾರಣ ನಿಗದಿತ ಗುರಿ ಮುಟ್ಟಲು ಆಗುತ್ತಿಲ್ಲ ಎಂದು ತಿಳಿಸುತ್ತಿದ್ದಾರೆ.
ರಾಜ್ಯ ಸರ್ಕಾರದಿಂದ ಸಂಬಂಧಪಟ್ಟ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಗಮನ ಹರಿಸಿ ರೇಷ್ಮೆ ಕೃಷಿಗೆ ಸರಿಯಾದ ರೀತಿಯಲ್ಲಿ ಪ್ರೋತ್ಸಾಹಿಸಿದರೆ ನಿರ್ದಿಷ್ಟ ಗುರಿ ಮುಟ್ಟಲು ಅನುಕೂಲವಾಗುತ್ತದೆ ಎಂದು ಬಿ.ಎ.ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.
ರೇಷ್ಮೆ ಸಹಾಯಕ ನಿರ್ದೇಶಕರ ಕಛೇರಿ ಮತ್ತು ತಾಂತ್ರಿಕ ಸೇವಾ ಕೇಂದ್ರ ಬೆಟ್ಟದಪುರ, ತಾಂತ್ರಿಕ ಸೇವಾ ಕೇಂದ್ರ, ರೇಷ್ಮೆ ಕೃಷಿ ಕ್ಷೇತ್ರ ಕಗ್ಗುಂಡಿ ಸೇರಿದಂತೆ 4 ಕಡೆ ಕಾರ್ಯ ನಿರ್ವಹಿಸಬೇಕಾಗಿದೆ. ಆದರೆ ಒಂದು ಕಡೆಯೂ ಸಹ ಸಮರ್ಪಕವಾಗಿ ಸಿಬ್ಬಂದಿ ಇಲ್ಲದೆ ರೇಷ್ಮೆ ಸಹಾಯಕ ನಿರ್ದೇಶಕ ಎಸ್.ಸಿದ್ದರಾಜು, ಪ್ರದರ್ಶಕ ರಾಮಚಂದ್ರ, ಚಂದ್ರೇಗೌಡ, ಶಿವನಂಜಯ್ಯ, ಸಿ.ಸಿ.ಕಲ್ಯಾಣಕುಮಾರ್, ರಾಜೇಶ್ವರಿ, ಹೆಚ್.ಎಂ. ಕುಮಾರ್, ಸೋಮನಾಯಕ, ಪ್ರಭಾಕರ್, ನಾಗರತ್ನಮ್ಮ ಸೇರಿದಂತೆ ಕೇವಲ 11 ಮಂದಿ ಅವರವರ ಹುದ್ದೆಗನುಸಾರ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅದರಲ್ಲಿ ಎಸ್. ಸಿದ್ದರಾಜು ರವರು ಮಡಿಕೇರಿ ಜಿಲ್ಲೆಯ ಉಸ್ತುವಾರಿಯನ್ನು ಹೊತ್ತಿದ್ದು ಸೋಮನಾಯಕ ಎಂಬುವರು ಕೆ.ಆರ್. ನಗರದಿಂದ ನಿಯೋಜನೆಗೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದರೂ ಸಹ ರೈತರಿಗೆ ಯಾವುದೇ ಕೊರತೆಯಾಗದಂತೆ ಮಾಹಿತಿ ನೀಡುತ್ತಿದ್ದೇವೆ ಎಂದು ರೇಷ್ಮೆ ಕೃಷಿ ಸಹಾಯಕ ನಿರ್ದೇಶಕ ಎಸ್.ಸಿದ್ದರಾಜು ಹೇಳುತ್ತಿದ್ದಾರೆ.
ಎನ್.ಆರ್.ಇ.ಜಿ.ಎ. ಅಡಿಯಲ್ಲಿ ಹೊಸದಾಗಿ ಹಿಪ್ಪುನೇರಳೆ ನರ್ಸರಿ ಸಸಿ ಬೆಳೆಸಲು ಅನುಕೂಲ ಹಾಗೂ ಕಾಂಪೋಸ್ಟ್ ಗುಂಡಿ, 2ನೇ ವರ್ಷದ ತೋಟ ನಿರ್ವಹಣೆ, ಮತ್ತು ಹನಿ ನೀರಾವರಿ ಉಪಕರಣಗಳ ಸಹಾಯಧನ ಸೇರಿದಂತೆ ಹಲವಾರು ರೀತಿಯಲ್ಲಿ ರೇಷ್ಮೆ ಕೃಷಿ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ವಿವರಿಸಿದರು.
ಶಿಫಾರಸು ಮಾಡಿದ ರೀತಿಯಲ್ಲಿ ನಿರ್ವಹಣೆ ಮಾಡಬೇಕು, ಈ ದೃಷ್ಟಿಯಲ್ಲಿ ಪ್ರತಿ ವರ್ಷ 5 ದಿನಗಳ ತರಬೇತಿ ನೀಡಲಾಗುತ್ತಿದೆ, ಇದರ ಅನುಕೂಲವನ್ನು ಪಡೆದುಕೊಳ್ಳಬೇಕು ಎಂದು ಸಿದ್ದರಾಜು ಸಲಹೆ ನೀಡಿದ್ದಾರೆ. ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವ ಬಗ್ಗೆ ಅನೇಕ ಬಾರಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದು ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಸಿದ್ದರಾಜು ಮನವಿ ಮಾಡಿಕೊಂಡಿದ್ದಾರೆ.
~ ವರದಿ: ಬಿ.ಆರ್. ರಾಜೇಶ್.