ಮೈಸೂರು

ಡಾ. ಅಂಬೇಡ್ಕರ್ ಆಶಯಗಳನ್ನು ಬಿಜೆಪಿ ಜಾರಿಗೆ ತರುತ್ತಿದೆ: ಮಹೇಶ್ ಮಡವಾಡಿ

ಬೈಲಕುಪ್ಪೆ: ಡಾ. ಬಿ.ಆರ್. ಅಂಬೇಡ್ಕರ್‌ರವರ ಆಶಯದಂತೆ ಬಿಜೆಪಿ ಪಕ್ಷವು ದೀನದಲಿತರ, ಹಿಂದುಳಿದವರ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದು ಬಿಜೆಪಿ ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಮಹೇಶ್ ಮಡವಾಡಿ ತಿಳಿಸಿದರು.

ಅವರು ತಾಲೂಕಿನ ಮರಡಿಯೂರು ಗ್ರಾಮದಲ್ಲಿ ಡಾ.ಬಿಆರ್.ಅಂಬೇಡ್ಕರ್‌ರವರ 125ನೇ ಜನ್ಮದಿನೋತ್ಸವದ ಅಂಗವಾಗಿ ತಾಲೂಕು ಬಿಜೆಪಿ ಎಸ್‌ಸಿ ಮೋರ್ಚಾ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರದಲ್ಲಿ ಅಸ್ತಿತ್ವದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಹಿಂದ ವರ್ಗಕ್ಕೆ ಜೀವವಿಮಾ ಸೌಲಭ್ಯ ಒಳಗೊಂಡಂತೆ, ಜನಧನ್ ಯೋಜನೆ, ಮುದ್ರಾ ಯೋಜನೆ, ಬಿಪಿಎಲ್‌ನವರಿಗೆ ಉಚಿತ ಗ್ಯಾಸ್ ವಿತರಣೆ ಮೊದಲಾದ ಬಡವರ ಪರ ಯೋಜನೆಗಳನ್ನು ಜಾರಿಗೆ ತಂದಿರುವುದು ಅವರಿಗಿರುವ ಅಹಿಂದ ಪರ ಕಾಳಜಿಯನ್ನು ಸೂಚಿಸುತ್ತದೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಣೀಶ್‌ರವರು ಮಾತನಾಡಿ, ದೇಶಾದ್ಯಂತ ಅಂಬೇಡ್ಕರ್‌ರವರ 125ನೇ ಜನ್ಮದಿನೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು ಎಲ್ಲಾ ವರ್ಗದ ಜನರು ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಅಂಬೇಡ್ಕರ್‌ರವರ ಆಶಯದಂತೆ ಸರ್ವರಲ್ಲೂ ಸಮಾನತೆ, ಸ್ವಾತಂತ್ರ್ಯ ಹಾಗೂ ಭ್ರಾತೃತ್ವವನ್ನು ಮೂಡಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ. ಆ ಕೆಲಸವನ್ನು ಪ್ರಸ್ತುತ ಬಿಜೆಪಿ ಸರ್ಕಾರವು ಕೈಗೊಳ್ಳುವ ನಿಟ್ಟಿನಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.

ಬಿಜೆಪಿ ತಾಲೂಕು ಎಸ್‌ಸಿ ಮೋರ್ಚಾ ಅಧ್ಯಕ್ಷರಾದ ಕೆ.ಕೆ. ನಾರಾಯಣ ಅವರು ಮಾತನಾಡಿ, ದಲಿತಪರ ಕಾಳಜಿಯನ್ನು ಹೊಂದಿರುವ ನರೇಂದ್ರ ಮೋದಿಯವರು ಪ್ರಪಂಚದ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಇವರು ಅಧಿಕಾರ ವಹಿಸಿಕೊಂಡ ಕೇವಲ 3 ವರ್ಷಗಳಲ್ಲಿ ಇಡೀ ವಿಶ್ವವೇ ಭಾರತದತ್ತ ಅವಲೋಕಿಸುವಂತೆ ಮಾಡಿದ್ದಾರೆ. ಇವರು ಜಾರಿಗೆ ತರುತ್ತಿರುವ ಆರ್ಥಿಕ ಮತ್ತು ವಿದೇಶಾಂಗ ನೀತಿಗಳು ಮುಂದಿನ ದಿನಗಳಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಿ ನಿರ್ಮಾಣವಾಗಲು ಸಹಕಾರಿಯಾಗಿದೆ. ಜಾತ್ಯಾತೀತವಾಗಿ ಹಾಗೂ ಧರ್ಮಾತೀತವಾಗಿ ನರೇಂದ್ರಮೋದಿ ಹಾಗೂ ಯಡಿಯೂರಪ್ಪನವರ ನೇತೃತ್ವದಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದು ಖಚಿತ ಎಂದು ತಿಳಿಸಿದರು.

ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 200 ಮಂದಿ ಗ್ರಾಮಸ್ಥರು ಮಧುಮೇಹ, ರಕ್ತದೊತ್ತಡ ಸೇರಿದಂತೆ ಇತರೆ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಪಿ.ಜೆ.ರವಿ, ಪ್ರಧಾನ ಕಾರ್ಯದರ್ಶಿಗಳಾದ ಕಿರಣ್‌ಜೈರಾಮ್‌ಗೌಡ, ಆನಂದ್‌ಕೊಣಸೂರು, ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸೋಮಣ್ಣ, ರವಿ.ಎಂ, ರೈತ ಮೋರ್ಚಾ ಅಧ್ಯಕ್ಷ ವೀರಭದ್ರ, ಮುಖಂಡರಾದ ಪ್ರಸನ್ನಕೇಶವ, ಬಿ.ಎಸ್.ರಾಮಚಂದ್ರ, ಬೆಮ್ಮತ್ತಿಕೃಷ್ಣ, ಅಶಾಬಾಳೆಕಟ್ಟೆ, ಬೆಮ್ಮತ್ತಿಚಂದ್ರು, ಕೃಷ್ಣೇಗೌಡ, ಶರವಣ, ಗ್ರಾಮಸ್ಥರಾದ ಎಂ.ಪಿ.ರಾಜು, ಕೆ.ಸಿ.ಗಣೇಶ್, ಸತೀಶ್, ರವಿ, ಗಿರೀಶ್, ಪುರುಷೋತ್ತಮ ಹೆಗ್ಗಡೆ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Leave a Reply

comments

Related Articles

error: