
ಮೈಸೂರು
ಕಾಮಗಾರಿಗಳನ್ನು ಮೂರನೇ ವ್ಯಕ್ತಿಯಿಂದ ಪರಿಶೀಲನೆಗೆ ಒಳಪಡಿಸಿ: ಡಿಸಿ ಸೂಚನೆ
ಸಿಸಿಡಿ ಯೋಜನೆಯಡಿ ಕೈಗೊಂಡಿರುವ ಮನೆಗಳ ನಿರ್ಮಾಣ ಹಾಗೂ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವ ಯೋಜನೆಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಸೂಚಿಸಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜೇನುಕುರುಬರ ಪ್ರಗತಿಪರಿಶೀಲನಾ ಸಭೆಯಲ್ಲಿ ಡಿ.ರಂದೀಪ್ ಮಾತನಾಡಿದರು. ಕೆಲವು ಯೋಜನೆಗಳಿಗೆ ನಿಗದಿಪಡಿಸಿರುವ ಅನುದಾನವು ಅನಿವಾರ್ಯ ಕಾರಣಗಳಿಂದ ವೆಚ್ಚವಾಗದಿದ್ದರೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಅವರ ಅನುಮತಿಯ ಮೇರೆಗೆ ಅವಶ್ಯವಿರುವ ಯೋಜನೆಗಳಲ್ಲಿ ಅನುದಾನವನ್ನು ವೆಚ್ಚ ಮಾಡುವಂತೆ ತಿಳಿಸಿದರು.
ಜೇನು ಕುರುಬರ ಅಭಿವೃದ್ಧಿಗಾಗಿ ಸಂರಕ್ಷಣೆ ಮತ್ತು ಅಭಿವೃದ್ಧಿ ಯೋಜನೆಯಡಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಕೈಗೊಳ್ಳುವ ಕಾಮಗಾರಿಗಳನ್ನು ಮೂರನೇ ವ್ಯಕ್ತಿ ಪರಿಶೀಲನೆಗೆ ಒಳಪಡಿಸಬೇಕು. ಕಾಮಗಾರಿಯನ್ನು ಮೂರನೇ ವ್ಯಕ್ತಿ ಪರಿಶೀಲನೆಗೆ ಒಳಪಡಿಸುವುದರಿಂದ ಅವರು ಕಾಮಗಾರಿ ಪೂರ್ಣವಾಗಿದೆಯೇ, ಎಲ್ಲ ಸಾಮಗ್ರಿಗಳು ಉಪಯೋಗವಾಗಿದೆಯೇ ಎಂದು ಎಲ್ಲವನ್ನೂ ಪರಿಶೀಲಿಸಿ ವರದಿ ನೀಡುತ್ತಾರೆ ಎಂದು ತಿಳಿಸಿದರು.
ಕಾಮಗಾರಿಗಳು ನಡೆಯುವ ವೇಳೆ ಸ್ಥಳಕ್ಕೆ ತಾಲೂಕು ಪರಿಶಿಷ್ಟ ವರ್ಗಗಳ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಅಷ್ಟೇ ಅಲ್ಲದೇ ಸ್ಥಳೀಯರೊಂದಿಗೆ ಚರ್ಚಿಸಿ ಕಾಮಗಾರಿ ಉತ್ತಮ ರೀತಿಯಲ್ಲಿ ನಡೆಯುವ ಕುರಿತು ಖಾತ್ರಿ ಪಡಿಸಿಕೊಳ್ಳಬೇಕು. ದೂರುಗಳು ಬಂದಲ್ಲಿ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಸಭೆಯಲ್ಲಿ ಸಮಗ್ರ ಗಿರಿಜನ ಯೋಜನೆಯ ಸಮನ್ವಯಾಧಿಕಾರಿ ಶಿವಕುಮಾರ್, ಜಿಲ್ಲಾಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.