ಕರ್ನಾಟಕಮೈಸೂರು

ಯುವಸಂಭ್ರಮದಲ್ಲಿ ಅತಿರೇಕದ ಪ್ರದರ್ಶನಕ್ಕೆ ಅವಕಾಶವಿಲ್ಲ: ಯುವದಸರಾ ಸಮಿತಿಯಿಂದ ನಿರ್ದೇಶನ

ದಸರಾ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಮುಖ ಆಕರ್ಷಣೆಗಳಲ್ಲೊಂದಾದ ಯುವಸಂಭ್ರಮದಲ್ಲಿ ನೃತ್ಯ ಪ್ರದರ್ಶನ ಮಾಡುವವರು ಅಸಭ್ಯವೆನಿಸುವ ಉಡುಗೆ ತೊಡುವುದನ್ನು ಯುವದಸರಾ ಸಮಿತಿ ನಿರ್ಬಂಧಿಸಿದೆ. ಇದಲ್ಲದೆ ನೃತ್ಯಕ್ಕೆ ಆಯ್ಕೆ ಮಾಡಿಕೊಳ್ಳುವ ವಿಷಯ ಪ್ರೇಕ್ಷಕರಿಗೆ ಮೆಚ್ಚುಗೆಯಾಗುವಂತಿರಬೇಕು, ವಿಳಂಬದಿಂದಾಗುವ ಕಿರಿಕಿರಿ ತಪ್ಪಿಸಲು ಪ್ರದರ್ಶನ ನೀಡುವ ತಂಡ ನಿಗದಿತ ಸಮಯಕ್ಕೆ ಹಾಜರಿರಬೇಕು ಎಂದು ಯುವದಸರಾ ಸಮಿತಿ ನಿರ್ದೇಶನ ನೀಡಿದೆ.

ಬುಧವಾರ ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಸಭಾಂಗಣದಲ್ಲಿ ಯುವದಸರಾ ಸಮಿತಿ ನಡೆಸಿದ ವಿವಿಧ ಕಾಲೇಜಿನ ಪ್ರಾಂಶುಪಾಲರ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಾಂಶುಪಾಲರಿಂದ ಈ ಕುರಿತು ಅನೇಕ ಸಲಹೆಗಳು ವ್ಯಕ್ತವಾದವು. ನಂತರ ಮಾತನಾಡಿದ ಸಮಿತಿಯ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸೋಮಶೇಖರ್ ಅವರು ಯುವಸಂಭ್ರಮದಲ್ಲಿ ಪಾಲ್ಗೊಳ್ಳುವವರಿಗೆ ನೃತ್ಯ ತಂಡಗಳಿಗೆ ಈ ಬಾರಿ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಪ್ರಕಟಿಸಿದರು.

ಯುವಸಂಭ್ರಮ ಕಾರ್ಯಕ್ರಮವು ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸೆ.16 ರಿಂದ 21 ರವರೆಗೆ ಪ್ರತಿದಿನ ಸಂಜೆ 6.30 ರಿಂದ ರಾತ್ರಿ 10.30 ರವರೆಗೆ ನಡೆಯಲಿದ್ದು, ಪ್ರತಿನಿತ್ಯ 18 ರಿಂದ 20 ತಂಡಕ್ಕೆ ಕಾರ್ಯಕ್ರಮ ನೀಡಲು ಅವಕಾಶ ಮಾಡಿಕೊಡಲಾಗುತ್ತದೆ. ನೃತ್ಯದಲ್ಲಿ ಭಾಗವಹಿಸುವವರು 10 ರಿಂದ 12 ನಿಮಿಷಕ್ಕೆ ಸರಿಹೊಂದುವಂತೆ ನೃತ್ಯಾಭ್ಯಾಸವನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು. ಅಲ್ಲದೇ ನೃತ್ಯ ನಿರ್ದೇಶಕರಿಗೆ 5 ಸಾವಿರ ರೂ. ಗೌರವ ಧನ, ನೃತ್ಯದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ 300 ರೂ., ದೂರದೂರಿನಿಂದ ಬರುವ ನೃತ್ಯ ತಂಡಕ್ಕೆ ಪ್ರವಾಸ ಭತ್ಯೆ, ಸಂಜೆ ಉಪಾಹಾರ ಹಾಗೂ ನೀರಿನ ಬಾಟಲ್ ವ್ಯವಸ್ಥೆಯನ್ನು ಸಮಿತಿ ವತಿಯಿಂದಲೇ ಮಾಡಲಾಗುತ್ತದೆ ಎಂದರು.

web-dasara-yuvasambrama-meeting

ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ದಿನಾಚರಣೆಯ ಅಂಗವಾಗಿ ವಿಶ್ವಜ್ಞಾನ ದಿನಾಚರಣೆ, ದೇವರಾಜ ಅರಸು ಅವರ ಜೀವನ ಸಾಧನೆ, ಸಮಾಜ ಸುಧಾರಣಾ ಕಾರ್ಯಕ್ರಮಗಳು, ಜಲಸಂರಕ್ಷಣೆ, ಸಮಾಜ ಸುಧಾರಣಾ ಕಾರ್ಯಕ್ರಮಗಳು, ಮಹಿಳಾ ಸಬಲೀಕರಣ, ಸಾಮಾಜಿಕ ಜಾಲತಾಣಗಳ ಪ್ರಭಾವ ಎಂಬ ವಿಷಯಗಳ ಬಗ್ಗೆ ಕಾರ್ಯಕ್ರಮ ನೀಡಬೇಕೆಂದು ಸಲಹೆ ನೀಡಿದರು.

ರಾಜ್ಯದ 17 ವಿಶ್ವವಿದ್ಯಾನಿಲಯಗಳು ಮತ್ತು ಪಿಯುಸಿ ಕಾಲೇಜುಗಳಿಂದ ವಿದ್ಯಾರ್ಥಿಗಳು ಯುವ ಸಂಭ್ರಮದಲ್ಲಿ ಭಾಗವಹಿಸುತ್ತಿದ್ದು,  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಈಗಾಗಲೇ ನೂರಕ್ಕೂ ಅಧಿಕ ಕಾಲೇಜುಗಳಿಂದ ಅರ್ಜಿಗಳು ಬಂದಿವೆ. ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ತಂಡಗಳಿಗೆ ಯುವ ದಸರಾ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.

ಪಾಸ್ ವ್ಯವಸ್ಥೆ ಕಲ್ಪಿಸಿ: ನೃತ್ಯ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳ ಜೊತೆಗೆ ಕಾರ್ಯಕ್ರಮ ವೀಕ್ಷಿಸಲು ಅನುವಾಗುವಂತೆ ಶಿಕ್ಷಕರಿಗೆ ಪಾಸ್ ನೀಡಬೇಕು. ಇಲ್ಲವಾದಲ್ಲಿ ಪೊಲೀಸರಿಂದ ತೊಂದರೆ ಉಂಟಾಗುತ್ತದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಪ್ರಾಂಶುಪಾಲರು ಹೇಳಿದರು. ಸಮಿತಿಯು ಅವರ ಸಲಹೆಯನ್ನು ಸ್ವೀಕರಿಸಿ ಪಾಸ್ ವ್ಯವಸ್ಥೆ ಮಾಡುವುದಾಗಿ ತಿಳಿಸಿತು.

ನೃತ್ಯ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಗೌರವಧನದ ಮೊತ್ತ ತೀರಾ ಕಡಿಮೆ ಇರುವುದರಿಂದ ಅವರಿಗೆ ಕನಿಷ್ಠ 500 ರೂ. ನೀಡಿ ಎಂದು ಬೇಡಿಕೆ ಇಟ್ಟರು. ಆದರೆ ಸಮಿತಿಗೆ ನೀಡುತ್ತಿರುವ ಅನುದಾನ ಕಡಿಮೆಯಾಗಿರುವುದರಿಂದ ಈ ಬಗ್ಗೆ ಸಮಿತಿ ಸಭೇಯಲ್ಲಿ ಚರ್ಚಿಸುವುದಾಗಿ ಹೇಳಿದರು.

ಸಭೆಯಲ್ಲಿ ಯುವ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಕೆಐಎಡಿಬಿ ಅಧಿಕಾರಿ ರಾಜೇಶ್, ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಎಂ.ಎನ್. ನಟರಾಜು ಉಪಸ್ಥಿತರಿದ್ದರು.

 

Leave a Reply

comments

Related Articles

error: