ಕರ್ನಾಟಕಪ್ರಮುಖ ಸುದ್ದಿ

ಸ್ಥಳೀಯ ಸಂಸ್ಥೆಗಳ ಚುನಾವಣೆ ಜೂನ್ ನಲ್ಲಿ : ರಾಜ್ಯ ಚುನಾವಣಾ ಆಯೋಗ ಸುತ್ತೋಲೆ

ರಾಜ್ಯ(ಬೆಂಗಳೂರು),ಫೆ.14:- ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಡೆಟ್ ಫಿಕ್ಸ್ ಆಗಿದ್ದು, ಜೂನ್ ನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ರಾಜ್ಯಾದ್ಯಂತ ರಾಜ್ಯ ಚುನಾವಣಾ ಆಯೋಗ ಸುತ್ತೋಲೆ ಹೊರಡಿಸಿದೆ.

ಮತದಾರರ ಪಟ್ಟಿ ತಯಾರಿಸುವಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ಆಯೋಗ ಸುತ್ತೋಲೆ ಹೊರಡಿಸಿದ್ದು, ವಿಧಾನ ಸಭಾ ಚುನಾವಣೆ ಬೆನ್ನಲ್ಲೇ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಗಳಿಗೆ ಚುನಾವಣೆ ನಡೆಯಲಿದೆ. ವಾರ್ಡ್ ವಾರು ಮತದಾರರನ್ನು ಗುರುತಿಸಿ ಕರಡು ಮತದಾರರ ಪಟ್ಟಿಯನ್ನು ತಯಾರಿಸಿಕೊಳ್ಳಬೇಕು. ಈ ಕಾರ್ಯಕ್ಕೆ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಯ ಸಿಬ್ಬಂದಿಗಳ ಸಹಾಯವನ್ನು ಪಡೆದು ನಿಗದಿತ ಅಧಿಕಾರಿಗಳು ಪ್ರತಿಯೊಂದು ವಾರ್ಡ್ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ ವಾರ್ಡಿನಲ್ಲಿ ಬರುವ ಮತದಾರರನ್ನು ಗುರುತಿಸಬೇಕು. ಒಂದು ವಾರ್ಡಿನ ಮತದಾರರು ಮತ್ತೊಂದು ವಾರ್ಡಿನಲ್ಲಿ ಸೇರ್ಪಡೆಯಾಗದಂತೆ ಎಚ್ಚರಿಕೆ ವಹಿಸಬೇಕು. ವಿಧಾನಸಭಾ ಮತದಾರರ ಪಟ್ಟಿಯಲ್ಲಿರುವ ನಗರ ವ್ಯಾಪ್ತಿಯ ಮತದಾರರು ಯಾವುದೇ ಕಾರಣಕ್ಕೂ ಬಿಟ್ಟುಹೋಗದಂತೆ ಕ್ರಮವಹಿಸಬೇಕು. ಗ್ರಾಮೀಣ ಮತದಾರರ ಹೆಸರನ್ನು ಹಾಗೂ ವಿಧಾನಸಭಾ ಮತದಾರರಪಟ್ಟಿಯಲ್ಲಿ ಸೇರ್ಪಡೆಯಾಗದೇ ಇರುವ ಹೆಸರುಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗಾಗಿ ತಯಾರಿಸಲಾಗುವ ಮತದಾರರ ಪಟ್ಟಿಯಲ್ಲಿ ನೇರವಾಗಿ ಸೇರಿಸುವಂತಿಲ್ಲ. ವಿಧಾನಸಭಾ ಮತದಾರರ ಪಟ್ಟಿಯು ಅಂತಿಮವಾಗಿ ಪ್ರಕಟಗೊಳ್ಳುವವರೆಗೆ ವಾರ್ಡುಗಳನ್ನು ಗುರುತಿಸಿ ವಾರ್ಡುವಾರು ಮತದಾರರ ಕರಡನ್ನು ತಯಾರಿಸಿಟ್ಟುಕೊಳ್ಳುವಂತೆ ಹಾಗೂ ಮತದಾರರ ಪಟ್ಟಿಯ ಮುದ್ರಣಕ್ಕೆ ಮುದ್ರಕರನ್ನು ನಿಗದಿಪಡಿಸುವ ಬಗ್ಗೆಯೂ ಕೂಡಲೇ ಕ್ರಮ ಕೈಗೊಳ್ಳಬೇಕು. ಕೈಗೊಂಡ ಕ್ರಮದ ಬಗ್ಗೆ ಆಯೋಗಕ್ಕೆ ವರದಿ ನೀಡುವಂತೆ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: