ಮೈಸೂರು

ಕೆ.ಆರ್ ಕ್ಷೇತ್ರದ 223 ಬೂತ್ ಗಳಲ್ಲಿ 11 ಸಾವಿರ ಸಂಖ್ಯೆಯಷ್ಟು ಮತದಾರರನ್ನು ತೆಗೆದು ಹಾಕಲು ಹುನ್ನಾರ : ಎಸ್.ಎ ರಾಮದಾಸ್ ಆರೋಪ

ಮೈಸೂರು,ಫೆ.14:- ಕೆ.ಆರ್ ಕ್ಷೇತ್ರದ 223 ಬೂತ್ ಗಳಲ್ಲಿ ಸುಮಾರು 11 ಸಾವಿರ ಸಂಖ್ಯೆಯಷ್ಟು ಸ್ವಂತ ಮನೆಯಲ್ಲಿ ವಾಸಿಸುತ್ತಿರುವ ಮತದಾರರನ್ನು ತೆಗೆದು ಹಾಕಲು ಹುನ್ನಾರ ನಡೆಯುತ್ತಿದೆ ಎಂದು ಮಾಜಿ ಸಚಿವ ಎಸ್.ಎ ರಾಮದಾಸ್ ಆರೋಪಿಸಿದರು.

ಅವರು ಬುಧವಾರ ಬೆಳಿಗ್ಗೆ ಕುವೆಂಪು ನಗರದಲ್ಲಿರುವ ಜ್ಯೋತಿ ಕಾಲೇಜಿಗೆ ದಿಢೀರ್ ದಾಳಿ ನಡೆಸಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ನಡೆದಿರುವ ಅಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅಂದಾಜು 50 ರಿಂದ 70 ರಂತೆ ಕ್ಷೇತ್ರದ 223 ಬೂತ್ ಗಳಲ್ಲಿ ವಾಸವಾಗಿರುವ ಬಿಜೆಪಿ ಮತದಾರರನ್ನೇ  ಗುರಿಯನ್ನಾಗಿಟ್ಟುಕೊಂಡು ಓರ್ವ ವ್ಯಕ್ತಿ ಫಾರಂ ನಂ 7ರ ಆಧಾರದ ಮೇಲೆ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕಿತ್ತು ಹಾಕಲು ಮುಂದಾಗಿದ್ದಾರೆ. ಈ ಫಾರಂ ನಂ 7 ರಲ್ಲಿರುವ ಮತದಾರರ ಗಮನಕ್ಕೆ ಬಾರದಂತೆ ಅಕ್ರಮ ನಡೆದಿರುವುದು ಸಾಕ್ಷಿಯಾಗಿದೆ. ಈ ಎಲ್ಲಾ ಅರ್ಜಿಗಳನ್ನು ಒಬ್ಬ ವ್ಯಕ್ತಿಯೇ ಬರೆದು ಸ್ವತಃ ಆತನೆ ಬಿಎಲ್ಓ ಗಳಿಂದ ಪರಿಶೀಲಿಸಲಾಗಿದೆ ಎಂದು ದೃಢೀಕರಿಸಿರುತ್ತಾರೆ. ಈ ಸಂಬಂಧ ಬಿಎಲ್ಓ ಅನ್ನು ಸಂಪರ್ಕಿಸಿದಾಗ ತಾವು ಯಾವುದೇ ಸಹಿ ಮಾಡಿಲ್ಲವೆಂದು ಅವರು ತಿಳಿಸಿರುತ್ತಾರೆ ಎಂದು ಆರೋಪಿಸಿದರು.

ಮತದಾರರ ಪಟ್ಟಿಯಲ್ಲಿ ಮರಣ ಹೊಂದಿದ್ದರೂ ಸಹ ತಮಗೆ ಬೇಕಾದಂತ ಪ್ರದೇಶಗಳಲ್ಲಿ ಅವರನ್ನು ಇನ್ನು ಜೀವಂತವಾಗಿದ್ದಾರೆ ಎಂದು ಮತಪಟ್ಟಿಯಲ್ಲಿ ಉಳಿಸಿಕೊಂಡಿದ್ದಾರೆ. ಬಿಜೆಪಿಗೆ ಬಹುಮತ ಬಂದಿರುವ ಬೂತ್ ಗಳಲ್ಲಿ ಒಂದು ಮನೆಯಲ್ಲಿ 4 ಮತದಾರರಿದ್ದರೆ ಅದರಲ್ಲಿ ಇಬ್ಬರನ್ನು ಬೇರೆ ಬೂತ್ ಗೆ ವರ್ಗಾಯಿಸುವ ಮೂಲಕ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ. ಚುನಾವಣಾ ಸಂದರ್ಭದಲ್ಲಿ ಗೊಂದಲ ಸೃಷ್ಟಿಸುವ ಯೋಜನೆಯನ್ನು ಈಗಾಗಲೇ ರೂಪಿಸಲಾಗಿದೆ. ಪ್ರತಿಯೊಂದು ಬೂತ್ ನಲ್ಲಿಯು ಅಕ್ರಮ ನಡೆದಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ತೀರ್ಮಾನಿಸಲಾಗಿದೆ ಎಂದರು.

ಮತದಾರ ಪಟ್ಟಿಯಲ್ಲಿ ವ್ಯತ್ಯಾಸ ಕಂಡು ಬಂದಿರುವ ಬಗ್ಗೆ ಈಗಾಗಲೇ ವಿದ್ಯಾರಣ್ಯಪುರಂ, ನಜರ್ ಬಾದ್, ಕುವೆಂಪು ನಗರ ಪೊಲೀಸ್ ಠಾಣೆಗಳಲ್ಲಿ 2017ರ ನವೆಂಬರ್ 8 ರಂದು ದೂರು ದಾಖಲಿಸಲಾಗಿದೆ. ಮತದಾರರು ಬದುಕ್ಕಿದ್ದರೂ ಮರಣ ಹೊಂದಿದ್ದಾರೆ ಎಂದು ದಾವೆಯನ್ನು ಹೂಡಲಾಗಿದ್ದು, ಎನ್ ಸಿ ಆರ್ ನೀಡಿರುತ್ತಾರೆ. ಆದರೇ ಇದುವರೆಗೂ ಸಂಬಂಧಿಸಿದ ದೂರಿಗೆ ಯಾವುದೇ ಕ್ರಮವನ್ನು ಕೈಗೊಳ್ಳದಂತೆ ರಾಜ್ಯ ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹೇರಿರುವುದು ತಿಳಿದು ಬಂದಿದೆ. ಈ ರೀತಿ ಸರ್ಕಾರದ ಯಂತ್ರಗಳನ್ನು ದುರುಪಯೋಗಪಡಿಸಿಕೊಳ್ಳುವುದರೊಂದಿಗೆ ನಗರಪಾಲಿಕೆ ಅಧಿಕಾರಿಗಳನ್ನು, ಪೊಲೀಸ್ ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ಒತ್ತಡದಲ್ಲಿ ಸಿಲುಕಿಸಿರುವುದು ಶೋಚನೀಯ ಎಂದರು.

ಈಗಾಗಲೇ ನಗರದಾದ್ಯಂತ ಇರುವ ಎಲ್ಲಾ ಶಾಲೆಗಳಲ್ಲಿ ಬಿಎಲ್ಓಗಳನ್ನು ಸಂಪರ್ಕಿಸಿ ಅರ್ಜಿಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕೆಲವೆಡೆ ಅಕ್ರಮ ನಡೆದಿರುವುದು ಸಾಬೀತಾಗಿರುವುದರಿಂದ ಇದರ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ತೀರ್ಮಾನಿಸಲಾಗಿದ್ದು, ಹಾಗೆಯೇ ಅಧಿಕಾರಿಗಳು ಹಾಗೂ ಸಂಬಂಧ ಪಟ್ಟ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಾಳೆ ಬೆಳಿಗ್ಗೆ 10.30 ಕ್ಕೆ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಪ್ರತಿಭಟಣಾ ಧರಣಿ ನಡೆಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಬಿ.ವಿ ಮಂಜುನಾಥ್, ಕೆ.ಆರ್. ಕ್ಷೇತ್ರದ ಉಪಾಧ್ಯಕ್ಷ ಜೋಗಿ ಮಂಜು, ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: