ಮೈಸೂರು

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಂದ ನಂಜನಗೂಡಿನಲ್ಲಿ ಕಾಮಗಾರಿಗಳ ಪರಿಶೀಲನೆ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ. ಧ್ರುವಕುಮಾರ್ ಪ್ರಾಧಿಕಾರದ ವತಿಯಿಂದ ನಂಜನಗೂಡಿನಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದರು.

ನಂಜನಗೂಡು ಮೇದರಕೇರಿಯಲ್ಲಿ ನಡೆಯುತ್ತಿರುವ ಸಮುದಾಯ ಭವನದ ಮುಂದುವರೆದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ತಿಳಿಸಿದರು.

ನಂಜನಗೂಡು ಪಟ್ಟಣದ ಮೇದರಕೇರಿಯಲ್ಲಿರುವ ಮುಸ್ಲಿಂ ಸ್ಮಶಾನವಿರುವ ಸ್ಥಳವನ್ನು ಪರಿಶೀಲಿಸಿ ಈ ಸ್ಮಶಾನದ ಸುತ್ತ ಕಂಪೌಂಡ್ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹೇಳಿದರು. ಒಳಚರಂಡಿಯ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಅಲ್ಲೇ ನಿಂತಿರುವುದನ್ನು ಗಮನಿಸಿದ ಅವರು ಈ ಸಂಬಂಧ ಸಾಧಕ ಬಾಧಕಗಳ ಬಗ್ಗೆ ಪರಿಶೀಲಿಸಿ ಅಂದಾಜು ಪಟ್ಟಿ ಸಿದ್ಧಪಡಿಸಿ ಸಲ್ಲಿಸುವಂತೆ ತಿಳಿಸಿದರು.

30 ಲಕ್ಷರೂ. ಅಂದಾಜು ವೆಚ್ಚದಲ್ಲಿ ನಂಜನಗೂಡು ಪಟ್ಟಣದ ಪೌರಕಾರ್ಮಿಕರ ಕಾಲೋನಿಯ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಮತ್ತು ಹಾಗೂ 40 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಡೆಯುತ್ತಿರುವ ನಂಜನಗೂಡು ಪಟ್ಟಣದ ವಾರ್ಡ್ ನಂ. 9, ಆರ್.ಪಿ.ರಸ್ತೆ, ಸರ್ಕಾರಿ ಬಾಲಕರ ಶಾಲೆಯಿಂದ ರಾಜಾಜಿ ಕಾಲೋನಿಯ ಶ್ರೀ ಬಣ್ಣಾರಮ್ಮನ ದೇವಸ್ಥಾನದವರೆಗೆ ರಸ್ತೆ ಡಾಂಬರೀಕರಣ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿ ಚರಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆಗೆ ಡಾಂಬರೀಕರಣ ಮಾಡುವಂತೆ ಸೂಚಿಸಿದರು.

ಅಲ್ಲಿನ ಶ್ರೀರಾಂಪುರ ಕಾಲೋನಿಯ 1ನೇ ಮುಖ್ಯರಸ್ತೆ, 2ನೇ ಮುಖ್ಯರಸ್ತೆ ಹಾಗೂ ಉಳಿಕೆ ರಸ್ತೆ ಅಭಿವೃದ್ಧಿ ಕಾಮಗಾರಿ, ಶ್ರೀರಾಂಪುರ ಕಾಲೊನಿಯಿಂದ ಶಂಕರಪುರಕ್ಕೆ ಹೋಗುವ ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರಲ್ಲದೇ ಒಳಚರಂಡಿಯ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಅಲ್ಲೇ ನಿಂತಿರುವುದನ್ನು ಗಮನಿಸಿ ಒಳಚರಂಡಿ ನೀರನ್ನು ಯು.ಜಿ.ಡಿ.ಗೆ ಸಂಪರ್ಕ ಕಲ್ಪಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ನಂಜನಗೂಡು ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳ ಉಪಯೋಗಕ್ಕಾಗಿ ನಾಲ್ಕು ಆಧುನಿಕ ಶೌಚಾಲಯಗಳನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೊಠಡಿ ಕಾಮಗಾರಿಯನ್ನು ವೀಕ್ಷಿಸಿದರು. ಇದೇ ಸಂದರ್ಭ ಇನ್ನೂ ಹಲವು ಕಾಮಗಾರಿಗಳನ್ನು ಪರಿಶೀಲಿಸಿದರು.

ಈ ಸಂದರ್ಭ ಪ್ರಾಧಿಕಾರದ ಆಯುಕ್ತ ಡಾ. ಎಂ. ಮಹೇಶ್, ಕಾರ್ಯಪಾಲಕ ಅಭಿಯಂತರ ಬಿ.ಎನ್. ಪ್ರಭಾಕರ, ಪ್ರಾಧಿಕಾರದ ಸದಸ್ಯ ಭಾಸ್ಕರ್ ಎಲ್. ಗೌಡ, ವಲಯಾಧಿಕಾರಿ ಎಸ್.ಕೆ. ಭಾಸ್ಕರ್, ಮಹೇಶ್ ಬಾಬು ಮತ್ತಿತರರು ಧ್ರುವಕುಮಾರ್ ಜೊತೆಗಿದ್ದರು.

Leave a Reply

comments

Related Articles

error: