ಕರ್ನಾಟಕ

ಕೇಂದ್ರ ಸಚಿವ ಸದಾನಂದ ಗೌಡರಿಗೂ ತಟ್ಟಿದ ಹಳೆ ನೋಟು ಬಿಸಿ

ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಅವರಿಗೂ ನೋಟು ಅಮಾನ್ಯದ ಬಿಸಿ ತಟ್ಟಿದೆ. ಸಹೋದರನ ಮೃತದೇಹವನ್ನು ಖಾಸಗಿ ಆಸ್ಪತ್ರೆಯಿಂದ ಬಿಡಿಸಿಕೊಳ್ಳುವ ವೇಳೆ 48 ಸಾವಿರ ಹಣ ಪಾವತಿಸಬೇಕಿದ್ದು, ಹಳೆ ನೋಟು ನೀಡಿದಾಗ ಆಸ್ಪತ್ರೆ ಸಿಬ್ಬಂದಿ ಸ್ವೀಕರಿಸದ ಪ್ರಸಂಗ ಮಂಗಳವಾರ ನಡೆಯಿತು.

ಸದಾನಂದ ಗೌಡ ಅವರ ಸಹೋದರ ಡಿ.ವಿ. ಭಾಸ್ಕರ್ ಗೌಡ(54) ಅನಾರೋಗ್ಯದಿಂದ ಮಂಗಳವಾರದಂದು ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ನಿಧನ ಹೊಂದಿದ್ದರು. ಅವರ ಮೃತದೇಹವನ್ನು ಪಡೆಯಲು 48 ಸಾವಿರ ರು. ಬಾಕಿ ಹಣ ಪಾವತಿಸಬೇಕಿದ್ದು, ಸದಾನಂದ ಗೌಡರು 500, 1000 ರು. ನೋಟುಗಳನ್ನು ಕೊಡಲು ಹೋದಾಗ ಕೇಂದ್ರ ಸರಕಾರದ ಆದೇಶದ ಕಾರಣ ನೀಡಿ ರದ್ದಾದ ನೋಟುಗಳನ್ನು ಸ್ವೀಕರಿಸಲು ಆಸ್ಪತ್ರೆ ಸಿಬ್ಬಂದಿಗೆ ನಿರಾಕರಿಸಿದರು. ಹಳೆ ನೋಟು ಸ್ವೀಕರಿಸುವುದಿಲ್ಲ ಎಂದು ಲಿಖಿತ ರೂಪದಲ್ಲಿ ಸ್ಪಷ್ಟನೆ ನೀಡುವಂತೆ ಆಸ್ಪತ್ರೆ ಸಿಬ್ಬಂದಿಗೆ ಸಚಿವರು ಸೂಚಿಸಿದ್ದಾರೆ. ಬಳಿಕ ಚೆಕ್‍ ನೀಡಿ ಬಿಲ್ ಪಾವತಿಸಿದರು.

ಕೆಎಂಸಿ ಆಸ್ಪತ್ರೆ ಘಟಕಗಳ ಮುಖ್ಯಸ್ಥ ಸಾಗಿರ್ ಸಿದ್ದಿಕ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಅಮಾನ್ಯಗೊಂಡ ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂದು ನಮ್ಮ ಆಸ್ಪತ್ರೆ ಸಿಬ್ಬಂದಿ ಸದಾನಂದ ಗೌಡರಿಗೆ ಸೂಚಿಸಿದ್ದಾರೆ. ಕೇಂದ್ರ ಸರಕಾರ ಮತ್ತು ಆರ್‍ಬಿಐ ಆದೇಶದಂತೆ ನಾವು ಹಳೆ ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂದು ಲಿಖಿತ ಹೇಳಿಕೆಯನ್ನೂ ನೀಡಿದ್ದೇವೆ. ಬಳಿಕ ಅವರು ಚೆಕ್ ಮೂಲಕ ಬಿಲ್ ಮೊತ್ತ ಪಾವತಿಸಿದ್ದಾರೆ ಎಂದು ಹೇಳಿದ್ದಾರೆ.

ನ. 24 ರ ವರೆಗೆ ಆಸ್ಪತ್ರೆಗಳು ಹಳೆ ನೋಟುಗಳನ್ನು ಸ್ವೀಕರಿಸಬಹುದೆಂದು ಆದೇಶವಿದ್ದರೂ ಸ್ವೀಕರಿಸದ್ದಕ್ಕೆ ಸಚಿವ ಸದಾನಂದ ಗೌಡ ಆಕ್ರೊಶ ವ್ಯಕ್ತಪಡಿಸಿದ್ದಾರೆ.

Leave a Reply

comments

Related Articles

error: