
ಪ್ರಮುಖ ಸುದ್ದಿವಿದೇಶ
ಫ್ಲೋರಿಡಾ ಶಾಲೆಯಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ: 17 ಮಂದಿ ಸಾವು
ವಾಷಿಂಗ್ಟನ್,ಫೆ.15-ಶಾಲೆಯಿಂದ ಉಚ್ಚಾಟಿತನಾಗಿದ್ದ ಹಳೆ ವಿದ್ಯಾರ್ಥಿಯೊಬ್ಬ ಫ್ಲೋರಿಡಾ ಹೈಸ್ಕೂಲ್ ಆವರಣದಲ್ಲಿ ಬೇಕಾಬಿಟ್ಟಿ ಗುಂಡಿನ ದಾಳಿ ನಡೆಸಿದ ಪರಿಣಾಮ 17 ಮಂದಿ ಸಾವನ್ನಪ್ಪಿದ್ದಾರೆ.
ನಿಕೋಲಸ್ ಕ್ರರ್ (19) ಕೃತ ನಡೆಸಿದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಎಆರ್-15 ರೈಫಲ್ ನೊಂದಿಗೆ ಶಸ್ತ್ರಸಜ್ಜಿತನಾಗಿ ಬಂದ ನಿಕೋಲಸ್ ಕ್ರರ್ ಬೇಕಾಬಿಟ್ಟಿ ದಾಳಿ ನಡೆಸಿದ್ದಾನೆ. ಇದರಿಂದ 17 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಮಿಯಾಮಿಯಿಂದ 45 ಮೈಲು ದೂರದ ಪಾರ್ಕ್ಲ್ಯಾಂಡ್ನಲ್ಲಿರುವ ಮರ್ಜೋರಿ ಸ್ಟೋನ್ಮನ್ ಡಗ್ಲಾಸ್ ಹೈಸ್ಕೂಲ್ ನಲ್ಲಿ ನಡೆದಿದೆ.
ಇದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ನಿಕೋಲಸ್ ಕ್ರರ್ ನನ್ನು ಅಶಿಸ್ತಿನ ಕಾರಣದಿಂದ ಶಾಲೆಯಿಂದ ವಜಾಗೊಳಿಸಲಾಗಿತ್ತು ಎಂದು ಬ್ರೋವರ್ಡ್ ಕೌಂಟಿ ಶೆರೀಫ್ ಸ್ಕಾಟ್ ಇಸ್ರೇಲ್ ಹೇಳಿದೆ.
ಶಾಲೆಯೊಳಗೆ 12 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಶಾಲೆಯ ಹೊರಗೆ ಇಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯದಲ್ಲಿ ಹಾಗೂ ಇತರರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತಪಟ್ಟವರಲ್ಲಿ ವಿದ್ಯಾರ್ಥಿಗಳು ಹಾಗೂ ವಯಸ್ಕರು ಸೇರಿದ್ದಾರೆ.
ಇದು ಈ ವರ್ಷ ಅಮೆರಿಕದ ಶಾಲೆಗಳಲ್ಲಿ ನಡೆಯುತ್ತಿರುವ 18ನೇ ಶೂಟೌಟ್ ಪ್ರಕರಣವಾಗಿದ್ದು, ಐದು ವರ್ಷಗಳ ಹಿಂದೆ ನ್ಯೂಟೌನ್ನಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿ 20 ಮಂದಿ ವಿದ್ಯಾರ್ಥಿಗಳು ಹಾಗೂ ಆರು ಮಂದಿ ಶಿಕ್ಷಕರನ್ನು ಹತ್ಯೆ ಮಾಡಿದ್ದ. (ವರದಿ-ಎಂ.ಎನ್)