ಮೈಸೂರು

ರೇಷ್ಮೆ ಬಟ್ಟೆಯ ಹೊಳಪನ್ನು ಮೀರಿಸುವ ಯಾವುದೇ ಬಟ್ಟೆ ಪ್ರಪಂಚದಲ್ಲಿ ಬಂದಿಲ್ಲ : ಕೆ.ಎಂ.ಹನುಮಂತರಾಯಪ್ಪ

ಮೈಸೂರು,ಫೆ.15:- ಅನೇಕ ವಿಧದ ಆಕರ್ಷಣೀಯ ಬಟ್ಟೆಗಳು ಬಂದರೂ ರೇಷ್ಮೆ ಬಟ್ಟೆಯ ಹೊಳಪನ್ನು ಮೀರಿಸುವ ಯಾವುದೇ ಬಟ್ಟೆ ಪ್ರಪಂಚದಲ್ಲಿ ಬಂದಿಲ್ಲ ಎಂದು ಭಾರತ ಸರ್ಕಾರದ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ತಿಳಿಸಿದರು.

ಗುರುವಾರ ಮೈಸೂರಿನ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ರೇಷ್ಮೆ ಕೃಷಿ ವಿಜ್ಞಾನ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಲಾದ ಸಿರಿಬಯೋಮಿಕ್ಸ್ ಚಾಲೆಂಜಸ್, ಇನ್ನೋವೇಷನ್ಸ್ ಆ್ಯಂಡ್ ಸಲೂಷನ್ಸ್ ಮೂರುದಿನಗಳ ರಾಷ್ಟ್ರೀಯ ಸಮ್ಮೇಳನವನ್ನು  ಉದ್ಘಾಟಿಸಿ ಮಾತನಾಡಿದರು. ರೇಷ್ಮೆ ಹೊಳಪು ಎಷ್ಟಿದೆ ಎಂಬುದು ಸಭೆ ಸಮಾರಂಭಗಳಲ್ಲಿ ಪಾಲ್ಗೊಂಡಾಗ ಅವರು ಧರಿಸುವ ರೇಷ್ಮೆ ಉಡುಪೇ ತಿಳಿಸಿಕೊಡಲಿದೆ. ಆದಾಯದ ದೃಷ್ಟಿಯಿಂದ ರೇಷ್ಮೆ ಬಿಟ್ಟರೆ ಬೇರೆ ಯಾವುದೇ ಬೆಳೆ ಲಾಭದಾಯಕವಾಗಿಲ್ಲ. ಹತ್ತು ಜನರು ಮಾಡಬೇಕಾದ ಕೆಲಸವನ್ನು ಒಬ್ಬರೋ, ಇಬ್ಬರೋ ಮಾಡಿ ಮುಗಿಸಲು ಸಾಧ್ಯವಾಗುವ ಹಾಗೇ ವಿಜ್ಞಾನಿಗಳು ಮಾಡಿದ್ದಾರೆ. ಚೈನಾ ರೇಷ್ಮೆಗಿಂತಲೂ ಉತ್ತಮ ರೇಷ್ಮೆ ಭಾರತದ ರೇಷ್ಮೆಯಾಗಿದೆ. ಅದರಲ್ಲೂ ಕರ್ನಾಟಕದ ರೇಷ್ಮೆಗೆ ಹೆಚ್ಚಿನ ಬೇಡಿಕೆಯಿದೆ ಎಂದರು. ರೇಷ್ಮೆ ಬೆಳೆಗೆ ಉಪಯುಕ್ತವಾಗಿ ಹಲವು ಮಿಶನರಿಗಳು ಲಭ್ಯವಿದೆ. 14ಲಕ್ಷದ ಮಶಿನ್ ಗೆ  10ಲಕ್ಷರೂ. ಸಬ್ಸಿಡಿ ನೀಡಲಾಗುತ್ತಿದೆ. ಹಾಗೇ ಒಂದು ಕೋಟಿ ನಲ್ವತ್ತು ಲಕ್ಷರೂ ಮಶಿನ್ ಗೆ ಒಂದು ಕೋಟಿ ಸಬ್ಸಿಡಿ ನೀಡಲಾಗುತ್ತಿದೆ. ಅಷ್ಟೇ ಅಲ್ಲದೇ ರೈತರಿಗೆ ಅನೇಕ ಯೋಜನೆ ಕೊಡುಗೆಗಳನ್ನು ಸರ್ಕಾರ ನೀಡುತ್ತಿದೆ. ಇಷ್ಟು ಸಬ್ಸಿಡಿಗಳು ಯಾವುದಕ್ಕೂ ಇಲ್ಲ. ಸಾಕಷ್ಟು ಮಂದಿ ಇದ್ದರೂ ಕೂಡ ರೈತರಿಗೆ ಇವುಗಳನ್ನೆಲ್ಲ ಸರಿಯಾಗಿ ತಲುಪಿಸಲು ಎಡವಿದ್ದೇವೆ. ಯಾವುದೇ ಬೆಳೆ ನಾಲ್ಕರಿಂದ ಎಂಟುಪಟ್ಟು ಲಾಭತರತಕ್ಕದ್ದೆಂದರೆ ಅದು ರೇಷ್ಮೆ ಮಾತ್ರ. ತರಬೇತಿ ನೀಡಿದರೂ ಕೂಡ ನಮಗೆ ಬೇಕಾಗುವಷ್ಟು ಬೆಳೆ ಬೆಳೆಯಲು ನಾವು ವಿಫಲರಾಗಿದ್ದೇವೆ. ಕರ್ನಾಟಕದಲ್ಲಿ ತಯಾರಿಸಲಾದ ರೇಷ್ಮೆ ಬಟ್ಟೆ ಇಡೀ ಪ್ರಪಂಚದಲ್ಲೇ ಹೆಸರುವಾಸಿ. ಅದಕ್ಕೇ ಬೇಡಿಕೆಗಳೂ ಜಾಸ್ತಿ. ಈಗ ಹೊರದೇಶಗಳಿಂದ ನಾವು ರೇಷ್ಮೆಯನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ದೇಶದಲ್ಲಿ ಬೆಳೆಯುವ  ರೇಷ್ಮೆ ಇಲ್ಲಿನ ಜನರಿಗೆ ಪೂರೈಕೆಯಾದ ಬಳಿಕ ನಾವು ಹೊರದೇಶಗಳಿಗೆ ಕಳುಹಿಸುವಂತಾಗಬೇಕು ಎಂದರು. ರೇಷ್ಮೆಯ ಕುರಿತು ತಿಳಿದಿಲ್ಲದವರೂ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದಾರೆ. ಅದರಕ್ಕಾಗಿ ಸರಿಯಾದ ಮಾಹಿತಿಗಳು ರೈತರಿಗೆ ದೊರಕುತ್ತಿಲ್ಲ ಅದಕ್ಕಾಗಿ ಇತ್ತೀಚೆಗೆ ಅಸ್ಸಾಂನ ಗುವಾಹಟಿಯಲ್ಲಿ ನಡೆದ ಬೋರ್ಡ್ ಮೀಟಿಂಗ್ ನಲ್ಲಿ ಯಾವುದೇ ಕೆಲಸಗಾರರನ್ನು ತೆಗೆದುಕೊಳ್ಳಬೇಕಾದರೆ ಸಿರಿಕಲ್ಚರ್ ಅವರನ್ನೇ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದು, ಅದು ಸಭೆಯಲ್ಲಿ ಪಾಸಾಗಿದೆ ಎಂದರು. ರೇಷ್ಮೆ ಬೆಳೆಯಲ್ಲಿ ನಷ್ಟವಿಲ್ಲ. ಲಾಭವೇ ಜಾಸ್ತಿ. ಯುವಕರು ರೇಷ್ಮೆಯ ಜೊತೆಜೊತೆಗೆ ಹಲವು ಕೆಲಸಗಳಿವೆ. ಯುವಕರು ಅದರಲ್ಲಿ ತೊಡಗಿಸಿಕೊಳ್ಳಬೇಕು. ರೇಷ್ಮೆ ಕೃಷಿಕರಿಗೆ ಸರಿಯಾದ ಮಾಹಿತಿ ನೀಡಿ ಅವರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಸಿ.ಬಸವರಾಜು, ಕುಲಸಚಿವೆ ಡಿ.ಭಾರತಿ, ಬಾಗಲಕೋಟ ತೋಟಗಾರಿಕಾ ವಿವಿಯ ವಿಶ್ರಾಂತ ಕುಲಪತಿ ಡಾ.ಎಸ್.ಬಿ.ದಂಡಿನ್, ರೇಷ್ಮೆ ಕೃಷಿ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಹೆಚ್.ಬಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: