ಕರ್ನಾಟಕ

ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕೋತ್ತರ ಸೀಟುಗಳನ್ನು ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ : ಬಂಧನ

ರಾಜ್ಯ(ಬೆಂಗಳೂರು)ಫೆ.15:- ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕೋತ್ತರ (ಪಿಜಿ) ಸೀಟುಗಳನ್ನು ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂ. ಹಣ ಪಡೆದು ವಂಚಿಸುತ್ತಿದ್ದ ಇಬ್ಬರು ಪದವೀಧರರನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯ ಡ್ಯಾಡೀಸ್ ಎಲಿಕ್ಸರ್ ಅಪಾರ್ಟ್‌ಮೆಂಟ್‌ನ ರಜತ್ ಶೆಟ್ಟಿ (31) ಹಾಗೂ ಕೊಡಿಗೆಹಳ್ಳಿಯ ಜಯ ಪ್ರಕಾಶ್ ಸಿಂಗ್ (31) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 1 ಕೋಟಿ 3 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಬಿಟಿಎಂ ಲೇಔಟ್‌ನ 2ನೇ ಹಂತದಲ್ಲಿ ಗ್ಲೋಬಲ್ ಲರ್ನಿಂಗ್ ಅಂಡ್ ಎಜುಕೇಷನ್ ಕನ್ಸಲ್ಟೆನ್ಸಿ ಕಚೇರಿ ತೆಗೆದು ಪ್ರತಿಷ್ಠಿತ ಕಾಲೇಜುಗಳಲ್ಲಿ ಪಿಜಿ ಸೀಟು ಕೊಡಿಸುವುದಾಗಿ ವೈದ್ಯಕೀಯ ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದರು. ಆರೋಪಿಗಳಿಂದ ವಂಚನೆಗೊಳಗಾದ ಸುದರ್ಶನ್, ಸಂದೀಪ್ ಹಾಗೂ ರಾಹುಲ್ ಕುಮಾರ್ ಎಂಬುವವರು ನೀಡಿದ್ದ ದೂರು ದಾಖಲಿಸಿ ತನಿಖೆ ಕೈಗೊಂಡ ಮೈಕೋ ಲೇಔಟ್ ಪೊಲೀಸ್ ಇನ್ಸ್‌ಪೆಕ್ಟರ್ ಆರ್.ಎಂ. ಅಜಯ್ ಮತ್ತು ಅವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ಬಂಧಿತ ರಜತ್ ಶೆಟ್ಟಿ, ಕುಂದಾಪುರ ಮೂಲದವನಾಗಿದ್ದು, ಬಿಇ ಪದವೀಧರನಾಗಿದ್ದಾನೆ. ಎರಡು ವರ್ಷಗಳ ಕಾಲ ಪ್ರತಿಷ್ಠಿತ ಐಟಿ ಕಂಪನಿಗಳಲ್ಲಿ ಕೆಲಸ ಮಾಡಿದ್ದು, ಮಣಿಪಾಲ್‌ನಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ಹಲವರಿಗೆ ವಂಚಿಸಿದ್ದ. ಈ ಸಂಬಂಧ 2013 ರಲ್ಲಿ ಮಣಿಪಾಲ್ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ 8 ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದ ವಿಚಾರಣೆಯಲ್ಲಿವೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ತಿಳಿಸಿದರು. ಮತ್ತೊಬ್ಬ ಆರೋಪಿ ಜಯಪ್ರಕಾಶ್ ಸಿಂಗ್ ಜಾರ್ಖಂಡ್‌ನ ಧನ್ ಭಾಗ್ ಮೂಲದವನಾಗಿದ್ದು, ಬಿಬಿಎಂ ಪದವೀಧರನಾಗಿದ್ದಾನೆ. ಹಿಂದೆ ಮೆಡಿಕಲ್ ಕಾಲೇಜುಗಳಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ಹಲವರಿಗೆ ವಂಚಿಸಿದ್ದು, ಈತನ ವಿರುದ್ಧ ಸಂಜಯ್ ನಗರ ಹಾಗೂ ಕೊಡಿಗೆಹಳ್ಳಿ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಬಂಧಿತ ಜಯಪ್ರಕಾಶ್ ಸಿಂಗ್, ಅತ್ತೆ – ಮಾವನ ಹೆಸರಿನಲ್ಲಿ ಹೆಚ್.ಡಿ.ಎಫ್.ಸಿ. ಬ್ಯಾಂಕ್‌ನಲ್ಲಿಟ್ಟಿದ್ದ 50 ಲಕ್ಷ ರೂ. ಡಿಪಾಜಿಟ್, ಉಳಿತಾಯ ಖಾತೆಯಲ್ಲಿದ್ದ 12 ಲಕ್ಷ ರೂ. ಹಾಗೂ ಅಪಾರ್ಟ್‌ಮೆಂಟ್ ಒಂದರಲ್ಲಿ  ಪ್ಲ್ಯಾಟ್ ಖರೀದಿಸಲು ಆರೋಪಿ ರಜತ್ ಶೆಟ್ಟಿ, ಮುಂಗ‌ಡವಾಗಿ ನೀಡಿದ್ದ 20 ಲಕ್ಷ ರೂ. ಜೊತೆಗೆ ಖಾಸಗಿಯವರಿಗೆ ನೀಡಿದ್ದ 9.45 ಲಕ್ಷ ಷೇರುಗಳಲ್ಲಿ ತೊಡಗಿಸಿದ್ದ 12.5 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಅಲ್ಲದೆ, ಬಲೋನಾ ಕಾರು, ರಾಯನ್ ಎನ್ ಫೀಲ್ಡ್ ಬೈಕ್, 3 ಲಕ್ಷ ರೂ. ಬೆಲೆಯ ಚಿನ್ನಾಭರಣ, ಲ್ಯಾಪ್ ಟಾಪ್, ಇತರೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ನಗರದ ವಿವಿಧೆಡೆ ಜೆ.ಪಿ. ಕನ್ಸಲ್ಟೆನ್ಸಿ, ನಾರಾಯಣ ಕನ್ಸಲ್ಟೆನ್ಸಿ, ಐಆರ್‌ಎಸ್ ಕನ್ಸಲ್ಟೆನ್ಸಿ ಇನ್ನಿತರ ಹೆಸರುಗಳಲ್ಲಿ 5 ಕಚೇರಿಗಳನ್ನು ತೆರೆದು ವೈದ್ಯಕೀಯ ಸೀಟು ಕೊಡಿಸುವುದಾಗಿ ಆಕಾಂಕ್ಷಿಗಳಿಂದ ಕೋಟ್ಯಾಂತರ ರೂ. ಗಳ ವಂಚನೆ ನಡೆಸಿ, ವಿದೇಶ ಪ್ರಯಾಣ ಮಾಡಿ, ಮೋಜು ಮಸ್ತಿ ಮಾಡುತ್ತಾ ವಿಲಾಸಿ ಜೀವನ ನಡೆಸುತ್ತಿರುವುದು ತನಿಖೆಯಲ್ಲಿ ಕಂಡುಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: