ಮೈಸೂರು

ರಾಜಕುಮಾರ್ ಉದ್ಯಾನವನವನ್ನು ಅಭಿವೃದ್ಧಿಪಡಿಸಲು ಒತ್ತಾಯ: ಅಭಿಮಾನಿಗಳ ಸಂಘದಿಂದ ಪ್ರತಿಭಟನೆ

ಮೈಸೂರು ನಗರದ ಹೃದಯಭಾಗದಲ್ಲಿರುವ ವರನಟ ಡಾ. ರಾಜಕುಮಾರ್ ಅವರ ಉದ್ಯಾನವನದ ಅವ್ಯವಸ್ಥೆ ಖಂಡಿಸಿ ಸುವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಬೇಕೆಂದು ಜಿಲ್ಲಾಡಳಿತ ಹಾಗೂ ಪಾಲಿಕೆಯನ್ನು ಒತ್ತಾಯಿಸಿ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಉದ್ಯಾನವನದ ಮುಂಭಾಗ ಬುಧವಾರ ಪ್ರತಿಭಟನೆ ನಡೆಯಿತು.

ಉದ್ಯಾನವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಸಾಹಿತಿ ಬನ್ನೂರು ಕೆ.ರಾಜು ಅವರು, ಸಮಸ್ತ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿಯಂತಿದ್ದ ಕರ್ನಾಟಕ ರತ್ನ ಡಾ.ರಾಜಕುಮಾರ್ ಅವರು ಕನ್ನಡದ ಕೀರ್ತಿಯನ್ನು ವಿಶ್ವದೆತ್ತರಕ್ಕೂ ಮೆರೆಸಿದ ವಿಶ್ವಮಾನ್ಯ ಕಲಾವಿದ. ಕನ್ನಡ ನಾಡು ಕಂಡ ಇಂಥ ಮಹಾನ್ ಕಲಾವಿದರ ಹೆಸರಿನಲ್ಲಿ ಮೈಸೂರು ಮಹಾನಗರಪಾಲಿಕೆ ನಿರ್ಮಿಸಿರುವ ಉದ್ಯಾನವನ ಸೂಕ್ತ ನಿರ್ವಹಣೆ, ಸಂರಕ್ಷಣೆ ಇಲ್ಲದೆ ಅಧ್ವಾನವಾಗಿದ್ದು ಬಿಡಾಡಿ ದನಗಳ, ಇಲಿ ಹೆಗ್ಗಣಗಳ ಖಾಲಿಪೋಲಿಗಳ ತಾಣವಾಗಿದೆ. ಅನೈತಿಕ ಚಟುವಟಿಕೆಗಳ ಬೀಡಾಗಿದೆ. ಇದರಿಂದ ಪ್ರತಿದಿನ ಮುಂಜಾನೆ, ಸಂಜೆ ವಾಯುವಿಹಾರಕ್ಕೆಂದು ಬರುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.

ಸ್ವಚ್ಛ ನಗರವೆಂದು ದೇಶದಲ್ಲೇ ಮೊದಲ ಸ್ಥಾನ ಗಳಿಸಿರುವ ಮೈಸೂರು ನಗರವನ್ನು ಅಣಕಿಸುವಂತೆ ನಗರದ  ಹೃದಯ ಭಾಗದಲ್ಲಿ ಅಶುಚಿತ್ವಮಯವಾಗಿ ರಾಜಕುಮಾರ್ ಗೌರವಕ್ಕೆ ಕಳಂಕಪ್ರಾಯವಾಗಿ ನಿಂತಿದೆ. ಕೂಡಲೇ ಉದ್ಯಾನವನವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸುವುದರ ಮೂಲಕ ರಾಜಕುಮಾರ್ ಅವರಂತಹ ಮೇರು ನಟರ ಘನತೆಗೆ ಮೆರುಗು ತರಬೇಕೆಂದು ಒತ್ತಾಯಿಸಿದರು.

ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಸಮಗ್ರ ಕರ್ನಾಟಕ ವೇದಿಕೆ ಅಧ್ಯಕ್ಷ ಅರವಿಂದ ಶರ್ಮ, ಮೈಸೂರು ಕನ್ನಡ ವೇದಿಕೆಯ ರಾಧಾಕೃಷ್ಣ, ಪ್ಯಾಲೇಸ್ ಬಾಬು, ಕಾಂಗ್ರೆಸ್ ಮುಖಂಡ ಎಸ್.ಆರ್. ರವಿ, ಕುರುಬಾರಹಳ್ಳಿ ಧನಪಾಲ್ ಸೇರಿದಂತೆ ನೂರಾರು ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

comments

Related Articles

error: