ಕರ್ನಾಟಕ

ಕಂಟೈನರ್ ಬ್ರೇಕ್ ವಿಫಲ : ಮಡಿಕೇರಿಯಲ್ಲಿ ತಪ್ಪಿದ ಭಾರೀ ಅನಾಹುತ

ರಾಜ್ಯ(ಮಡಿಕೇರಿ) ಫೆ.15 :- ಬ್ರೇಕ್ ವಿಫಲಗೊಂಡ ಕಂಟೈನರ್‍ವೊಂದು ರಸ್ತೆಯ ಪಕ್ಕದ ಗುಡ್ಡಕ್ಕೆ ಗುದ್ದಿದ ಘಟನೆ ಮಡಿಕೇರಿ ನಗರದ ನಾರ್ತ್‍ಕೂರ್ಗ್ ಬಳಿ ನಡೆದಿದೆ.

ಮೈಸೂರಿನಿಂದ ಮಂಗಳೂರಿಗೆ ಜಾನುವಾರುಗಳ ಆಹಾರವನ್ನು ಸಾಗಿಸುತ್ತಿದ್ದ ಕಂಟೈನರ್ ಮಡಿಕೇರಿ ನಗರ ಪ್ರವೇಶಿಸುತ್ತಿದ್ದಂತೆ ಬ್ರೇಕ್ ವಿಫಲಗೊಂಡಿರುವ ಬಗ್ಗೆ ಚಾಲಕ ರಾಮ್ ಸಮದ್ ಯಾದವ್ ಅವರ ಗಮನಕ್ಕೆ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಅವರು ಯಾವುದೇ ಜೀವಹಾನಿ ಆಗದ ರೀತಿ ಕಂಟೈನರ್‍ನ್ನು ನಿಯಂತ್ರಿಸಬೇಕೆಂದು ಸಮಯ ಪ್ರಜ್ಞೆ  ಮೆರೆದು ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದರು. ಇಳಿಜಾರಾದ ಮಂಗಳೂರು ರಸ್ತೆಗೆ ಸಾಗಿದರೆ ಅಪಾಯ ಖಚಿತವೆಂದು ಅರಿತ ರಾಮ್ ಸಮದ್ ಯಾದವ್ ಕಂಟೈನರ್‍ನ್ನು ಮಡಿಕೇರಿ ನಗರದೊಳಗೆ ಕೊಂಡೊಯ್ದು ನಗರ ಪೊಲೀಸ್ ಠಾಣೆ ಬಳಿ ಬರುತ್ತಿದ್ದಂತೆ ಮುಂದೆ ಇಳಿಜಾರು ಇದೆ ಎಂದು ತಿಳಿದ ಚಾಲಕ ತಕ್ಷಣ ಕಂಟೈನರ್‍ನ್ನು ನಾರ್ತ್‍ಕೂರ್ಗ್ ಕ್ಲಬ್‍ನ ಕಾಂಪೌಡ್‍ಗೆ ಡಿಕ್ಕಿ ಹೊಡೆಸಬೇಕೆಂದು ಪ್ರಯತ್ನಿಸಿದರಾದರೂ ನಿಯಂತ್ರಣಕ್ಕೆ ಬಾರದ ಕಂಟೈನರ್ ಫುಟ್‍ಪಾತ್‍ನ ಮೇಲೆ ಸಾಗಿ ರಸ್ತೆ ಪಕ್ಕದ ಗುಡ್ಡಕ್ಕೆ  ಡಿಕ್ಕಿಯಾಗಿ ಭಗವಾನ್ ಗ್ಲಾಸ್ ಅಂಗಡಿ ಬಳಿ ಬಂದು ನಿಂತಿದೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಚಾಲಕ ರಾಮ್ ಸಮದ್ ಯಾದವ್ ಅವರ ಸಮಯ ಪ್ರಜ್ಞೆಯನ್ನು ಶ್ಲಾಘಿಸಿದರು. ಸಾರ್ವಜನಿಕರು ಕೂಡ ಭೇಷ್ ಎಂದರು. ಬ್ರೇಕ್ ವಿಫಲಗೊಂಡು ನಗರವನ್ನು ಪ್ರವೇಶಿಸಿದ ಕಂಟೈನರ್ ರಸ್ತೆಯಲ್ಲಿ ಸಾಗುತ್ತಿದ್ದ ಕಾರು ಹಾಗೂ ಬೈಕ್‍ಗಳ ಮೇಲೆ ಹರಿಯುವ ಸಾಧ್ಯತೆಗಳಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಂಗಳೂರು ರಸ್ತೆಗೆ ಹೋಗಿದ್ದರೂ ಸಾವುನೋವುಗಳ ಸಂಭವಿಸುತ್ತಿತ್ತು. ಆದರೆ ಚಾಲಕನ ಸಾಹಸದಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: