ಮೈಸೂರು

ಸಂಚಾರ ತಪಾಸಣೆ ವೇಳೆ ಮೊಬೈಲ್‍ನಲ್ಲಿಯೇ ವಾಹನ ದಾಖಲಾತಿಗಳನ್ನು ತೋರಿಸಲು ಅವಕಾಶ

ಮೈಸೂರು,ಫೆ.16:-  ಸಾರಿಗೆ ಇಲಾಖೆಯು ಈ-ಆಡಳಿತ ಇಲಾಖೆಯ ಸಹಯೋಗದೊಂದಿಗೆ, ಸಾರಿಗೆ ಇಲಾಖೆಯ ಸೇವೆಗಳನ್ನು ಡಿಜಿಲಾಕರ್ (Digilocker) ವೇದಿಕೆಯ ಮೂಲಕ ನಾಗರೀಕರು ಪಡೆಯಲು ಅವಕಾಶ ಕಲ್ಪಿಸಿದ್ದು, ಇದರಿಂದ ಚಾಲನಾ ಪರವಾನಗಿ ಪತ್ರ (ಡಿ.ಎಲ್), ನೋಂದಣಿ ಪತ್ರ (ಆರ್.ಸಿ.) ಮತ್ತು ಮಾಲಿನ್ಯ ನಿಯಂತ್ರಣ ಪತ್ರ  (ಇ.ಸಿ) ದಾಖಲಾತಿಗಳನ್ನು ನಾಗರೀಕರು ತಮ್ಮ ಡಿಜಿಲಾಕರ್ ಖಾತೆಯಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು ಡಿಜಿಲಾಕರ್  ಖಾತೆಯಿಂದ ಡೌನ್‍ಲೋಡ್ ಮಾಡಿಕೊಂಡಿರುವ ದಾಖಲಾತಿಗಳು ಸಾರಿಗೆ ಇಲಾಖೆಯು  ವಿತರಿಸುವ ಸ್ಮಾರ್ಟ್‍ಕಾರ್ಡ್ ಅಥವಾ ಕಾಗದ ರೂಪದಲ್ಲಿ ನೀಡಿರುವ ಮೂಲ ಪ್ರಮಾಣ ಪತ್ರಗಳಿಗೆ ಸಮನಾಗಿವೆ. ಮೈಸೂರು ನಗರದ ಸಾರ್ವಜನಿಕರು  ವಾಹನ ಚಾಲನೆ ಮಾಡುವಾಗ ಇನ್ನು ಮುಂದೆ ಈ ಮೇಲ್ಕಂಡ ದಾಖಲಾತಿಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗದೇ ಇರುವ ಸಂಧರ್ಭದಲ್ಲಿ ನಗರದ ಸಂಚಾರ ಪೊಲೀಸರು ವಾಹನ ತಪಾಸಣೆಗೆ ಒಳಪಡಿಸಿದಾಗ ಡಿಜಿಲಾಕರ್ ವೇದಿಕೆಯ ಮೂಲಕ  ಡೌನ್‍ಲೋಡ್ ಮಾಡಿಕೊಂಡಿರುವ ಮೇಲ್ಕಂಡ ದಾಖಲಾತಿಗಳನ್ನು ಪೊಲೀಸರಿಗೆ ತಮ್ಮ ಮೊಬೈಲ್ ಮೂಲಕವೇ ತೋರಿಸಬಹುದು.  ಇದನ್ನು ಅಧಿಕೃತವೆಂದು ಪರಿಗಣಿಸಲಾಗುತ್ತದೆ.  ಆದರೆ ವಾಹನವು ಅಪಘಾತ ಮತ್ತು ಇತರೇ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದ ಸಂದರ್ಭದಲ್ಲಿ,  ಸಂಬಂಧಿಸಿದ ಅಧಿಕಾರಿಗಳಿಗೆ ಮೂಲ ದಾಖಲೆಗಳನ್ನೇ ತೋರಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಾರಿಗೆ ಇಲಾಖೆಯ ವೆಬ್‍ಸೈಟ್  http://transport.karnataka.gov.inಅನ್ನು ಪರಿಶೀಲಿಸಬಹುದು. ಸಾರ್ವಜನಿಕರು ಅವರ ಅನುಕೂಲಕ್ಕಾಗಿ ಪ್ರಾರಂಭಿಸಲಾಗಿರುವ ಡಿಜಿಲಾಕರ್ ಸೇವೆಯನ್ನು ಉಪಯೋಗಿಸಿಕೊಳ್ಳುವಂತೆ ಅವರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: