ಕರ್ನಾಟಕ

ರಾಜ್ಯ ಬಜೆಟ್‍ನಲ್ಲಿ ಅಲ್ಪಸಂಖ್ಯಾತರಿಗಾಗಿ ಹಲವು ಸೌಲಭ್ಯಗಳ ಘೋಷಣೆ

ಬೆಂಗಳೂರು(ಫೆ.16): ಕರ್ನಾಟಕ ಬಜೆಟ್ 2018ರಲ್ಲಿ ಅಲ್ಪಸಂಖ್ಯಾತರಿಗೆ ಸಿಕ್ಕ ಕೊಡುಗೆಗಳು ಹೀಗಿವೆ: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ವೃತ್ತಿ ಪ್ರೋತ್ಸಾಹ ಯೋಜನೆಯಡಿ ಮೆಕ್ಯಾನಿಕ್, ಕಾರ್ಪೆಂಟರ್, ಹಣ್ಣು ಮತ್ತು ತರಕಾರಿ ಮಾರಾಟ, ಬೇಕರಿ, ಪಂಚರ್ ಮತ್ತು ವೆಲ್ಡಿಂಗ್ ಶಾಪ್, ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ ರಿಪೇರಿ ಇತ್ಯಾದಿ ವೃತ್ತಿಗಳಿಗೆ ಬ್ಯಾಂಕ್ ಸಹಯೋಗದೊಂದಿಗೆ ಸಾಲ ಮತ್ತು ಸಹಾಯಧನ ನೀಡಲು 30 ಕೋಟಿ. ಕ್ರೈಸ್ತ ಸಮುದಾಯ ಅಭಿವೃದ್ಧಿ ಹಾಗೂ ವಿವಿಧ ಕಾರ್ಯಕ್ರಮಗಳ ಅನುಷ್ಟಾನಕ್ಕಾಗಿ 200 ಕೋಟಿ ರೂ.ಗಳನ್ನು ಒದಗಿಸಲಾಗುವುದು.

ಜೈನ ಮತ್ತು ಸಿಖ್ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 80 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು. ದಾರುಲ್ ಉಲೂಮ್ ಸಬೀಲುರ್ ರೆಹಮಾನ ರಿದ್, ಅರೆಬಿಕ್ ಕಾಲೇಜು ಬೆಂಗಳೂರು ಆವರಣದಲ್ಲಿ ಐವಾನ್-ಎ-ಅಶ್ರಫ್ ಸ್ಮಾರಕ ಭವನ ನಿರ್ಮಾಣ ಮಾಡಲು 10 ಕೋಟಿ ರೂ.ಗಳನ್ನು ಒದಗಿಸಲಾಗುವುದು.

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ (ಸೆಂಟ್ರಲ್ ಕಾಲೇಜು) ವೈವಿಧ್ಯತೆ ಮತ್ತು ಅಲ್ಪಸಂಖ್ಯಾತರ ಅಧ್ಯಯನ ಪೀಠ ಸ್ಥಾಪಿಸಲಾಗುವುದು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಾದರಿಯಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯ/ ವಸತಿ ಶಾಲೆಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಹಾಗೂ ಅತ್ಯುತ್ತಮ ಫಲಿತಾಂಶ ಗಳಿಸಿದ ವಸತಿ ಶಾಲೆ/ ಕಾಲೇಜುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ 15 ಕೋಟಿ ರೂ.ಗಳ ವೆಚ್ಚದಲ್ಲಿ ಮಹಿಳೆಯರಿಗೆ ಕಾರ್ಯಾರಂಭ (Start up) ಸಾಲ ಸೌಲಭ್ಯ ಯೋಜನೆ ಜಾರಿಗೊಳಿಸಲಾಗುವುದು.

ಮದರಸಗಳ ಆಧುನೀಕರಣ, ಔಪಚಾರಿಕ ಶಿಕ್ಷಣ ಒದಗಿಸಲು ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹಂತ ಹಂತವಾಗಿ 15 ಕೋಟಿ ರೂ.ಗಳ ಸಹಾಯಧನ ನೀಡಲಾಗುವುದು.

25 ಹೊಸ ಮೊರಾರ್ಜಿ ದೇಸಾಯಿ ವಸತಿ ಶಾಲೆ, 5 ಪದವಿ ಪೂರ್ವ ಮಹಿಳಾ ವಸತಿ ಕಾಲೇಜು, 2 ಮಾದರಿ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು. 25 ವಿದ್ಯಾರ್ಥಿನಿಲಯ, 10 ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳು, 4 ಬಿ.ಎಡ್. ಹಾಗೂ ಡಿ.ಎಡ್. ಆಂಗ್ಲ ಮಾಧ್ಯಮ ಬಾಲಕಿಯರ ವಸತಿ ಸಹಿತ ಕಾಲೇಜು ಮತ್ತು ಸಂಪನ್ಮೂಲ ಕೇಂದ್ರವನ್ನು ಪ್ರಾರಂಭಿಸಲಾಗುವುದು.

ಯೋಜನೆಯಡಿಯಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗಿರುವ 25 ಸ್ಥಳಗಳಲ್ಲಿ ವಿದ್ಯಾರ್ಥಿನಿಲಯ / ಮಾದರಿ / ಆದರ್ಶ ಶಾಲೆ / ವಸತಿ ಕಾಲೇಜುಗಳನ್ನು ಪ್ರಾರಂಭಿಸಲಾಗುವುದು. 25 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ತಲಾ 25 ದಾಖಲಾತಿ ಸಂಖ್ಯೆ ಹೆಚ್ಚಿಸುವುದು. ಎಲ್ಲಾ ಮೆಟ್ರಿಕ್ ಪೂರ್ವ/ನಂತರ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಪರಸ್ಪರ ಪ್ರವೇಶ ನೀಡಲಾಗುವುದು.

ಐದು ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳನ್ನು ಮೇಲ್ದರ್ಜೆಗೇರಿಸಲಾಗುವುದು. 5 ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಸ್ತುತ ವಿಜ್ಞಾನ ವಿಭಾಗವಿದ್ದು, ಜೊತೆಗೆ ವಾಣಿಜ್ಯ ವಿಭಾಗ ಪ್ರಾರಂಭಿಸಲಾಗುವುದು.

10 ಮೊರಾರ್ಜಿ ದೇಸಾಯಿ ವಸತಿ ಶಾಲೆ ದಾಖಲಾತಿ ಸಂಖ್ಯಾಬಲ 50 ರಿಂದ 60ಕ್ಕೆ ಹೆಚ್ಚಿಸಲಾಗುವುದು.

ದಾಖಲಾತಿ ಪಡೆಯಲು ಪೋಷಕರ ವರಮಾನ ವಿದ್ಯಾರ್ಥಿನಿಲಯಗಳಿಗೆ 44,500ರೂ ಹಾಗೂ ವಸತಿ ಶಾಲೆಗಳಿಗೆ 1 ಲಕ್ಷ ರೂ. ಇದ್ದು, ಇದನ್ನು 2.5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು. ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯ ಮತ್ತು ವಸತಿ ಶಾಲಾ/ಕಾಲೇಜುಗಳ ವಿದ್ಯಾರ್ಥಿಗಳಿಗೆ ಕ್ರೈಸ್ ಮಾದರಿಯಲ್ಲಿ ದುರ್ಘಟನೆಗೆ ಪರಿಹಾರ ನೀಡಲಾಗುವುದು.

ಸರ್ಕಾರಿ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಎಲ್ಲಾ ವಸತಿ ಶಾಲೆಯ / ಕಾಲೇಜುಗಳ ಪ್ರತಿ ವಿದ್ಯಾರ್ಥಿಗೆ ಆಹಾರ ಭತ್ಯೆಯನ್ನು ಮಾಸಿಕ 100 ರೂ.ಗಳಳಿಗೆ ಹೆಚ್ಚಿಸಲಾಗುವುದು. ಖಾಸಗಿ ಅನುದಾನಿತ ಅನಾಥಾಲಯ/ ವಿದ್ಯಾರ್ಥಿಗಳ ಭೋಜನಾ ವೆಚ್ಚದ ದರಗಳನ್ನು ಮಾಹೆಯಾನ 750 ರೂ.ಗಳಿಂದ 800 ರೂ.ಗಳಿಗೆ ಹೆಚ್ಚಿಸಲಾಗುವುದು.

ಮತ್ತು 2ನೇ ಪಿ.ಯು.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಗೆ 2000 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು. ವೈದ್ಯಕೀಯ ಹಾಗೂ ತಾಂತ್ರಿಕ ಕೋರ್ಸುಗಳಲ್ಲಿ 1ನೇ ವರ್ಷದಲ್ಲಿ ಪ್ರವೇಶ ಹೊಂದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಟಡಿ ಕಿಟ್ ಯೋಜನೆಯಡಿ 25 ಸಾವಿರ ರೂ.ಗಳನ್ನು ನೀಡಲಾಗುವುದು. ಬಿ.ಎಡ್.

ಹಾಗೂ ಡಿ.ಎಡ್. ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 25,000 ರೂ.ಗಳ ವಿಶೇಷ ಪ್ರೋತ್ಸಾಹ ಧನ ನೀಡಲಾಗುವುದು.

ವಿದ್ಯಾಸಿರಿ ಯೋಜನೆಯಡಿ 2018-19ನೇ ಸಾಲಿನಿಂದ ಫಲಾನುಭವಿಗಳ ಸಂಖ್ಯೆಯನ್ನು 25000ಕ್ಕೆ ಹೆಚ್ಚಿಸಲಾಗುವುದು. ನದಾಫ್/ಪಿಂಜಾರ್ ಸಮುದಾಯದ ರಾಜ್ಯಮಟ್ಟದ ಸಂಘಕ್ಕೆ 2 ಕೋಟಿ ರೂ.ಗಳನ್ನು ಮತ್ತು ದಿ ಬ್ಯಾರಿ ವೆಲ್ಫೇರ್ ಅಸೋಸಿಯೇ೬ನ್ಗೆ ಮೈಸೂರಿನಲ್ಲಿ ದಿವಂಗತ ಅಜೀಜ್ ಸೇಠ್ ಸ್ಮಾರಕ ಸಮುದಾಯ ಭವನ ನಿರ್ಮಿಸಲು 3 ಕೋಟಿ ರೂ.ಗಳ ಅನುದಾನ ನೀಡಲಾಗುವುದು.

ಕಾನೂನು ಪದವೀಧರರಿಗೆ ಸಮಾಜ ಕಲ್ಯಾಣ ಇಲಾಖೆ ಮಾದರಿಯಲ್ಲಿ ಮಾಸಿಕ ತರಬೇತಿ ಭತ್ಯೆಯನ್ನು 4000 ರೂ.ಗಳಿಂದ 5000 ರೂ.ಗಳಿಗೆ ಹೆಚ್ಚಿಸಲಾಗುವುದು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವಿದ್ಯಾರ್ಥಿನಿಲಯಗಳಲ್ಲಿರುವ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಸಿ.ಇ.ಟಿ., ಓಇಇಖಿ ಪಠ್ಯಪುಸ್ತಕಗಳನ್ನು ಪೂರೈಸಲಾಗುವುದು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಉಚಿತವಾಗಿ JEE, NEET, GATE, GMATಇತ್ಯಾದಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುವುದು.

ಭಾರತದ ಪುರಾತತ್ವ ಸಮೀಕ್ಷೆ ಮತ್ತು ಕರ್ನಾಟಕ ರಾಜ್ಯದ ಪುರಾತತ್ವ ಸಮೀಕ್ಷೆ ಅಧೀನದಲ್ಲಿರುವ ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂಅತೀ ಸೂಕ್ಷ್ಮ ವಕ್ಫ್ ಆಸ್ತಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ 15 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯವನ್ನು ಒದಗಿಸಲು 800 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು. 2018-19ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ 2,281 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು.

(ಎನ್‍ಬಿ)

Leave a Reply

comments

Related Articles

error: