ಕರ್ನಾಟಕ

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಬಜೆಟ್‍ನಲ್ಲಿ ಹಲವು ಕೊಡುಗೆಗಳು

ಬೆಂಗಳೂರು (ಫೆ.16): ಸಮಾಜದಲ್ಲಿ ಬೇರೂರಿರುವ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಯುವಕರು ಬೇರೊಂದು ಸಮುದಾಯದ ಹುಡುಗಿಯನ್ನು ವಿವಾಹ ಮಾಡಿಕೊಂಡರೆ ಮೂರು ಲಕ್ಷ ಪ್ರೋತ್ಸಾಹಧನ ನೀಡುವುದಾಗಿ ಪ್ರಕಟಿಸಲಾಗಿದೆ. ಇದೇ ರೀತಿ ಪರಿಶಿಷ್ಟ ಜಾತಿಯ ಹುಡುಗಿ ಬೇರೊಂದು ಜಾತಿಯ ಯುವಕನನ್ನು ವಿವಾಹವಾದರೆ ಹಾಲಿ ಇರುವ ಮೂರು ಲಕ್ಷ ಪ್ರೊತ್ಸಾಹಧನದ ಬದಲಿಗೆ 5 ಲಕ್ಷ ಹಣವನ್ನು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‍ನಲ್ಲಿ ಘೋಷಿಸಿದರು. ಪರಿಶಿಷ್ಟ ಜಾತಿಯ ಯುವಕ, ಬೇರೊಂದು ಸಮುದಾಯದ ಯುವತಿಯನ್ನು ಮದುವೆಯಾದರೆ ಈ ಹಿಂದೆ ಎರಡು ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಈ ಹಣವನ್ನು ಮೂರು ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

ಇದೇ ರೀತಿ ಪರಿಶಿಷ್ಟ ಜಾತಿಯ ಯುವತಿ ಅನ್ಯ ಜಾತಿಯ ಯುವಕನನ್ನು ವಿವಾಹವಾದರೆ ಹಿಂದೆ ನೀಡಲಾಗುತ್ತಿದ್ದ ಮೂರು ಲಕ್ಷ ಪ್ರೋತ್ಸಾಹ ಧನವನ್ನು 5 ಲಕ್ಷದವರೆಗೆ ಹೆಚ್ಚಳ ಮಾಡುವ ಮೂಲಕ ಸಿದ್ದರಾಮಯ್ಯ ಈ ಸಮುದಾಯದ ಒಲವು ಗಳಿಸಲು ಯತ್ನಿಸಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ವೈದ್ಯಕೀಯ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವಂತಾಗಲು ಎಸ್ಸೆಸ್ಸೆಲ್ಸಿ ಸೇರಿದಂತೆ ಮತ್ತಿತರ ಪರೀಕ್ಷೆಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅತಿಹೆಚ್ಚು ಅಂಕ ಪಡೆದಿರುವ 100 ಬಾಲಕರು ಹಾಗೂ 100 ಬಾಲಕಿಯರಿಗೆ ಬೆಂಗಳೂರಿನಲ್ಲಿ ವಿಶೇಷ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುವುದು.

ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಎಂ, ಐಐಎಸ್‍ಸಿ, ಎನ್‍ಐಟಿ ಸೇರಿದಂತೆ ಮತ್ತಿತರ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಒಂದು ಲಕ್ಷ ರೂ. ಪ್ರೋತ್ಸಾಹಧನವನ್ನು ಎರಡು ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ನಗರ ಸಾರಿಗೆ ಸಂಸ್ಥೆಗಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ರೀತಿಯಲ್ಲಿ ಬಿಬಿಎಂಪಿ, ಮಹಾನಗರಪಾಲಿಕೆ, ಪುರಸಭೆಗಳಲ್ಲಿ ಪೌರಕಾರ್ಮಿಕರಿಗೆ ಸೇರಿದ ಒಬ್ಬ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಲು ಸರ್ಕಾರ ಮುಂದಾಗಿದೆ. ಇದೇ ರೀತಿ ಅರಣ್ಯ ಅವಲಂಬಿತ ಆದಿವಾಸಿಗಳಿಗೆ ಕೃಷಿ, ಯಂತ್ರೋಪಕರಣ, ನೀರಾವರಿ ಸೌಲಭ್ಯ, ಅರಣ್ಯ ಹಕ್ಕು ಕಾಯ್ದೆಯಡಿ ಮಂಜೂರಾದ ಜಮೀನುಗಳಲ್ಲಿ ಸೋಲಿಗ, ಜೇನುಕುರುಬ, ಇತರೆ ಬುಡಕಟ್ಟು ಜನಾಂಗದವರಿಗೆ ಕಾಫಿ ಬೆಳೆಯಲು ಉತ್ತೇಜನ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ,ಹಿರಿಯ ಮುತ್ಸದ್ದಿಗಳಾದ ಮಲ್ಲಿಕಾರ್ಜುನ ಸ್ವಾಮಿ, ಕೆ.ಪ್ರಭಾಕರ್, ಕೆ.ಎಚ್.ಪ್ರಭಾಕರ್ ಹೆಸರಿನಲ್ಲಿ ಸ್ಮಾರಕ ಭವನ ನಿರ್ಮಾಣಕ್ಕೆ ಒಂದು ಕೋಟಿ ಅನುದಾನ ನೀಡಲಾಗಿದೆ.

ಎಸ್ಸಿ- ಎಸ್ಟಿ ಗುತ್ತಿಗೆದಾರರಿಗೆ ಕೆಟಿಪಿಟಿ ಕಾಮಗಾರಿಗಳಿಗೆ ನಿಗದಿಪಡಿಸಿರುವ 50 ಲಕ್ಷವರೆಗಿನ ಮಿತಿಯನ್ನು ಒಂದು ಕೋಟಿಗೆ ಹೆಚ್ಚಳ ಮಾಡಿದ್ದರೆ, ಗುರು ಮಾತಂಗ ಮಹರ್ಷಿಗಳ ಸ್ಮರಣಾರ್ಥವಾಗಿ ಹಂಪಿಯಲ್ಲಿ ಸ್ಮಾರಕ ಭವನ ತಲೆಎತ್ತಲಿದೆ. ಮಂಗಳೂರಿನ ವಿಕಾಸಸೌಧ ಪಕ್ಕದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ಪೂರ್ತಿ ಭವನವನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣ ಮಾಡಲಾಗುವುದು. ಕರ್ನಾಟಕ ಖಾದಿ ಮಂಡಳಿ ವತಿಯಿಂದ ಬಿಪಿಎಲ್ ಕುಟುಂಬಗಳ ಮರುಪಾವತಿಗಾಗಿ ಸಾಲ ಮನ್ನಾ, ಆಶ್ರಮ ಶಾಲೆ, ಮೆಟ್ರಿಕ್‍ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಆಹಾರ ವೆಚ್ಚಕ್ಕಾಗಿ ನೀಡಲಾಗುತ್ತಿದ್ದ ಹಣವನ್ನು 1300, 1500 ಹಾಗೂ 1600 ರೂ.ಗೆ ಹೆಚ್ಚಿಸಲಾಗಿದೆ. ಹುಣಸೂರು ಹಾಗೂ ಎಚ್‍ಡಿಕೋಟೆಯಲ್ಲಿ ಆದಿವಾಸಿ ಸಮುದಾಯ ಭವನ ನಿರ್ಮಾಣಕ್ಕೆ ಒಂದು ಕೋಟಿ, ಸೋಲಿಗ, ಜೇನುಕುರುಬ, ಕಾಡುಕುರುಬ, ಇರುಳಿಗ, ಕೊರಗ, ಎರವ, ಅಸಲರು, ಹಕ್ಕಿಪಿಕ್ಕಿ, ಸಿದ್ದಿ ಇತ್ಯಾದಿ ಆದಿವಾಸಿಗಳ ಸಮಗ್ರ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ.

(ಎನ್‍ಬಿ)

Leave a Reply

comments

Related Articles

error: