ಮೈಸೂರು

ಜಾನಪದ ಕಲೆ ಇಂದು ಹುಡುಕಾಟದ ವಸ್ತುವಾಗಿದೆ : ಡಾ.ಕನ್ನಿಕ ಬೇಸರ

ಪ್ರಸ್ತುತ ಸಂದರ್ಭದಲ್ಲಿ ಜಾನಪದ ಕಲೆ, ನೆಲೆ, ಸೆಲೆ ಹುಡುಕಾಟದ ಸಂಕೇತವಾಗಿದೆ. ಆದರೆ ಎಲ್ಲರೂ ಹಣದ ಹಿಂದೆ ಬಿದ್ದಿದ್ದಾರೆ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ಉಪನ್ಯಾಸಕಿ ಡಾ.ಕನ್ನಿಕ ಬೇಸರ ವ್ಯಕ್ತಪಡಿಸಿದರು.

ಬುಧವಾರ ಮೈಸೂರಿನ ನಂಜರಾಜ ಬಹುದ್ದೂರ್ ಛತ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಜಾನಪದ ಕಲಾತಂಡಗಳ ತರಬೇತಿ ಕಾರ್ಯಾಗಾರವನ್ನು ಡಾ ಕನ್ನಿಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜಾನಪದ ಕಲೆ ಜನರಿಗೆ ಹತ್ತಿರವಾಗಿ ಸರಾಗವಾಗಿ ಸಿಗುವಂತಾದರೆ ದುಬಾರಿಯಾಗುತ್ತದೆ. ಜನರನ್ನು ರಂಜಿಸಬೇಕಾದ ಜಾನಪದ ಕಲೆ ಇಂದು ಹುಡುಕಾಟದ ವಸ್ತುವಾಗಿದೆ. ಕಲೆಯನ್ನು ಆಸ್ವಾದಿಸುವ ಪ್ರೇಕ್ಷಕರನ್ನು ಸಂಪಾದಿಸಬೇಕಾದ ಕಲಾವಿದರು ಹಣ ಸಂಪಾದನೆಗೆ ಪ್ರಮುಖ ಆದ್ಯತೆ ನೀಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಲೆ ಹಾಗೂ ಕಲಾವಿದರ ನಡುವೆ ರಾಜಕೀಯ ಬೆಳೆಯುತ್ತಿದ್ದು  ಇದು ಅಪಾಯಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸುಮಾರು 3036 ಜಾನಪದ ಕಲೆಗಳಿವೆ. ಇದರ ವಿವರ ಹಿರಿಯ ಸಂಶೋಧಕರಿಗೂ ತಿಳಿದಿಲ್ಲ. ಬೀದಿನಾಟಕಗಳು ಜಾನಪದ ಕಲೆಯಲ್ಲಿ ತನ್ನದೇ ಆದ ಪ್ರಾಮುಖ್ಯತೆ ಪಡೆದುಕೊಂಡಿದ್ದರೂ ಅವುಗಳನ್ನು ಕರ್ನಾಟಕ ಕಲೆಗಳಿಗೆ ಸೇರಿಸಬೇಕೋ ಬೇಡವೋ ಎಂಬ ಜಿಜ್ಞಾಸೆ ಇನ್ನೂ ನಡೆಯುತ್ತಲೇ ಇದೆ. ಕಲೆಯನ್ನು ಕಲೆಗಾರ ಸಮಾಜದ ಮುಖ್ಯ ಪರಿಧಿಗೆ ಕೊಂಡೊಯ್ಯಬೇಕು. ಆಗ ಮಾತ್ರ ಒಳಗಿರುವ ಕಲೆಗಳು ಹೊರಬರಲು ಸಾಧ್ಯ. ಇಲ್ಲವಾದರೆ ಕಲೆಯೊಂದಿಗೆ ಕಲಾವಿದನೂ ಮೂಲೆ ಗುಂಪಾಗುತ್ತಾನೆ.  ಜಾನಪದ ಕಲೆಯನ್ನು ಬಳಸಿಕೊಂಡು ಜನರಿಗೆ ಹತ್ತಿರವಾಗುವ, ಅವರಲ್ಲಿ ಸಮಾಜದ ಬಗ್ಗೆ, ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಕಲಾವಿದ ಮಾಡಬೇಕೆಂದು ಸಲಹೆ ನೀಡಿದರು.

ಕಂಸಾಳೆ, ಡೊಳ್ಳುಕುಣಿತ, ಪಟಕುಣಿತ ಸೇರಿದಂತೆ ಇನ್ನಿತರ ಕಲೆಗಳಲ್ಲಿ ಮಹಿಳೆ ಹಾಗೂ ಪುರುಷರಿಬ್ಬರೂ ಸಮಾನವಾಗಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಮಹಿಳಾ ಜಾನಪದ ಕಲಾವಿದರು ಇನ್ನೂ ಮುಖ್ಯವಾಹಿನಿಗೆ ತೆರದುಕೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ವೇತನ ತಾರತಮ್ಯ. ಕಲಾವಿದರೆಲ್ಲರೂ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುವ ಕೆಲಸ ಮಾಡುವಾಗ ಅವರಲ್ಲಿ ಮಹಿಳೆ, ಪುರುಷ ಎಂದು ವೇತನ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನ ವೇತನ ನೀಡಬೇಕು. ಆಗ ಮಾತ್ರ ಮಹಿಳೆಯರು ಮುಂಚೂಣಿಗೆ ಬರಲು ಸಾಧ್ಯ. ಸಂಪನ್ಮೂಲಗಳ ವಿಕೇಂದ್ರೀಕರಣ ಮಾಡದೆ, ಕೆಲವರ ಕಪಿಮುಷ್ಠಿಯಲ್ಲಿ ಕಲೆ ಸಿಲುಕಿಕೊಂಡರೆ ಜಾನಪದ ಕಲೆಗಳು ನಶಿಸಿ ಹೋಗುತ್ತವೆ. ಹಾಗಾಗಿ ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಿದಾಗ ಕಲೆಯೊಂದಿಗೆ ಕಲಾವಿದನೂ ಬೆಳೆಯುತ್ತಾನೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಉಡುಪಿ, ಕೊಡಗು ಹಾಗೂ ದಕ್ಷಿಣ ಕನ್ನಡದ ಕಲಾತಂಡಗಳು ಭಾಗವಹಿಸಿದ್ದವು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಬಸವರಾಜು, ಡಿಹೆಚ್‍ಇಯು ಸಹಸಂಪಾದಕ ರಾಜಹನುಮಯ್ಯ, ರಂಗಾಯಣದ ಹಿರಿಯ ಕಲಾವಿದ ವಿನಾಯಕ  ಭಟ್, ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ ಡಾ.ಮಹೇಶ್ವರಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: