ಮೈಸೂರು

ಸಮರ್ಪಕ ಇಂಧನ ಬಳಕೆ ಆರ್ಥಿಕ ಅಭಿವೃದ್ಧಿಗೆ ಸಹಕಾರಿ: ನಿರ್ಮಲಾ ಮಠಪತಿ

ಆರ್ಥಿಕ ಅಭಿವೃದ್ಧಿಯು ಸಮರ್ಪಕ ಎಲ್‍ಪಿಜಿ ಅನಿಲ ಬಳಕೆ ಮತ್ತು ಇಂಧನ ಉಳಿಕೆಯೊಂದಿಗೆ ಸಾಗುತ್ತದೆ. ನಾವು ಮುಂದಿನ ಪೀಳಿಗೆಗೆ ಇಂಧನ ಉಳಿಸಿಲ್ಲ ಎಂದಾದಲ್ಲಿ ಹಲವು ಅನಿಶ್ಚತೆಗಳು ಎದುರಾಗಲಿದೆ ಎಂದು ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಅಭಿಪ್ರಾಯಪಟ್ಟರು.

ಬುಧವಾರದಂದು ಗಾನಭಾರತಿ ಸಭಾಂಗಣದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿ. ಆಯೋಜಿಸಿದ್ದ ‘ಮಹಿಳೆಯರಿಗೆ ವಿದ್ಯುತ್ ಉಳಿತಾಯ, ಸೋಲಾರ್ ಬಳಕೆ ಹಾಗೂ ಮನೆಗಳಲ್ಲಿ ವ್ಯವಸ್ಥಿತವಾಗಿ ಅಡುಗೆ ಅನಿಲ ಬಳಸುವ ವಿಧಾನ’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಇಂಧನ ಬಳಕೆಯನ್ನು ಹತೋಟಿಯಲ್ಲಿಟ್ಟುಕೊಂಡರೆ ಯಾವುದೇ ಪೋಲು ನಡೆಯುವುದಿಲ್ಲ. ಶಕ್ತಿ ಸಂಪನ್ಮೂಲಗಳ ಗರಿಷ್ಠ ಬಳಕೆಯ ಮಿತಿಗಳನ್ನು ಪ್ರತಿಯೊಬ್ಬರೂ ತಿಳಿದಿರಬೇಕಾದ ಅವಶ್ಯಕತೆಯಿದೆ ಎಂದರು.

ಪ್ರಸ್ತುತ ಕಾಲಘಟ್ಟದಲ್ಲಿ ಆಹಾರ ಪೋಲು ಮಾಡುವುದು ಯುವಜನರ ಸಾಮಾನ್ಯ ಪ್ರವೃತ್ತಿಯಾಗಿ ಮಾರ್ಪಟ್ಟಿದೆ. ಆಹಾರ ಪೋಲು ಮಾಡುವುದರ ವಿರುದ್ಧ ವಿದೇಶಗಳಲ್ಲಿ ಕಠಿಣ ಕಾನೂನು ನಿಯಮಗಳಿವೆ. ಆದರೆ, ನಮ್ಮ ದೇಶದಲ್ಲಿ ಯಾವುದೇ ನಿಯಮಗಳಿಲ್ಲ. ಕಾನೂನಿದೆ ಎಂದು ಮಾತ್ರ ನಿಯಮ ಪಾಲಿಸಿದ್ದಲ್ಲಿ ನಮ್ಮ ಪ್ರಾಮಾಣಿಕತೆಗೆ ಬೆಲೆಯಿಲ್ಲ. ಈ ರೀತಿಯ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದರಿಂದ ಮಹಿಳೆಯರು ಜಾಗೃತರಾಗಿ ಇಂಧನ ಉಳಿಕೆಯ ಮಹತ್ವವನ್ನು ಅರಿಯಬಹುದು. ಮಹಿಳೆಯರಿಗೆ ಅರಿವು ಮೂಡಿದಲ್ಲಿ ಇಡೀ ಸಮಾಜವೇ ಬದಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಅಸೋಸಿಯೇಷನ್ ಸಹಾಯಕ ನಿರ್ದೇಶಕ ನವಿನ್ ಕುಮಾರ್ ಮಾತನಾಡಿ, ಮಹಿಳೆಯರು ದೇಶದ ಆಧಾರಸ್ತಂಭಗಳು. ಈ ರೀತಿಯ ಸೂಕ್ಷ್ಮ ವಿಚಾರಗಳ ಬಗ್ಗೆ ಮಹಿಳಾ ಸಂಘಗಳಿಗೆ ಶಿಕ್ಷಣ ನೀಡಬೇಕು. ಮುಂದಿನ ವರ್ಷಗಳಲ್ಲಿ ಪೆಟ್ರೋಲ್‍ ಉತ್ಪನ್ನಗಳ ತೀವ್ರ ಕೊರತೆ ಎದುರಿಸಬೇಕಾಗಬಹುದು. ಹಾಗಾಗಿ ನವೀಕರಿಸಬಹುದಾದ ಇಂಧನಗಳನ್ನು ಬಳಸುವುದು ನಮ್ಮ ಆದ್ಯತೆಯಾಗಿರಬೇಕು. ಕೇವಲ ಮಹಿಳೆಯರು ಮಾತ್ರ ಈ ರೀತಿಯ ಬದಲಾವಣೆಗಳನ್ನು ತರಲು ಸಾಧ್ಯ. ಇಂಧನ ಪೋಲು ಮತ್ತು ನವೀಕರಿಸಬಹುದಾದ ಇಂಧನಗಳ ಬಳಕೆ ಇಂತಹ ವಿಷಯಗಳಿಗೆ ನಾವು ಪ್ರಾಮುಖ್ಯತೆ ನೀಡಬೇಕೆಂದರು.

ಕೆಆರ್‍ಡಿಇಎಲ್ ಪ್ರಾಜೆಕ್ಟ್ ಇಂಜಿನಿಯರ್ ಡಿ.ಕೆ. ದಿನೇಶ್ ಕುಮಾರ್, ಮೈಸೂರು ಮಹಿಳಾ ವೇದಿಕೆ ಅಧ್ಯಕ್ಷೆ ಸುಮನಾ ರಘುನಂದನ್, ಸಂಸ್ಕೃತಿ ಮಹಿಳಾ ಸಂಘದ ಅಧ್ಯಕ್ಷೆ ಶ್ರೀದೇವಿ, ಮೈಸೂರು ಪಶ್ಚಿಮ ವಿಭಾಗದ ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆ ಸುಮನಾ ಶ್ರೀನಾಥ್ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: