ದೇಶಪ್ರಮುಖ ಸುದ್ದಿ

ನೋಟು ನಿಷೇಧದ ಕುರಿತು ಪ್ರಧಾನಿ ಮೌನ: ಭಾರತ್ ಬಂದ್‍ಗೆ ಟಿಎಂಸಿ ಕರೆ

ಕೋಲ್ಕತ: ನೋಟು ನಿಷೇಧದ ಕುರಿತು ಸಂಸತ್ತಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೌನ ಖಂಡಿಸಿ ನ.28ರಂದು ಭಾರತ್‍ ಬಂದ್‍ಗೆ ಕರೆ ನೀಡಲಾಗಿದೆ. ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂದ್‍ಗೆ ಕರೆ ನೀಡಿದ್ದಾರೆ.

ಬಂದ್‍ನಿಂದಾಗಿ ನ.28 ರಂದು ಸಂಚಾರ ವ್ಯವಸ್ಥೆಯಲ್ಲಿ ಏರುಪೇರಾಗುವುದರಿಂದ ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ. ದೂರಪ್ರಯಾಣ ಹೊರಡುವವರು ಮತ್ತು ತುರ್ತು ಕೆಲಸ ಕಾರ್ಯಗಳ ಮೇಲೆ ತೆರಳುವ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕಾಗಿದೆ.

ನೋಟು ನಿಷೇಧದಿಂದ ದೇಶಾದ್ಯಂತ ನಗದು ಕೊರತೆ ಕಂಡು ಬಂದಿದೆ. ಬಿಳಿ ಹಣದಲ್ಲೂ ಕೂಡ ವಹಿವಾಟು ನಡೆಸುವುದು ಕಷ್ಟಕರವಾಗಿದೆ. ಆಸ್ಪತ್ರೆ ಮತ್ತು ದಿನನಿತ್ಯದ ತುರ್ತು ಸೇವೆಗಳ ಮೇಲೂ ನೋಟು ನಿಷೇಧದಿಂದ ಅಡ್ಡ ಪರಿಣಾಮ ಉಂಟಾಗಿದೆ.

ಕೇಂದ್ರ ಸರ್ಕಾರ ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಯಾವ ರೀತಿಯ ಕ್ರಮ ಕೈಗೊಂಡಿದೆ ಎಂದು ಪ್ರಧಾನಿ ಮೋದಿ ಸಂಸತ್‍ನಲ್ಲಿ ವಿವರಣೆ ನೀಡಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದ್ದವು. ಆದರೆ ಪ್ರಧಾನಿ ಈವರೆಗೂ ಮೌನವಾಗಿರುವುದನ್ನು ಖಂಡಿಸಿ ಪ್ರತಿಭಟಿಸಲು ನ.28ರಂದು ಭಾರತ್ ಬಂದ್‍ಗೆ ಕರೆ ನೀಡಲಾಗಿದೆ ಎಂದು ತಿಳಿದುಬಂದಿದೆ.

Leave a Reply

comments

Related Articles

error: