ಕರ್ನಾಟಕಮೈಸೂರು

ಬಂದ್ ಸಂದರ್ಭ ಸಾರ್ವಜನಿಕ ಆಸ್ತಿ ಹಾನಿಗೊಳಿಸಿದರೆ ಕಠಿಣ ಕ್ರಮ: ಡಿಸಿ

ಕಾವೇರಿ ನದಿ ನೀರು ವಿವಾದದ ಕುರಿತು ವಿವಿಧ ಸಂಘಟನೆಗಳು ಸೆಪ್ಟೆಂಬರ್ 9 ರಂದು ರಾಜ್ಯ ಬಂದ್‍ಗೆ ಕರೆ ನೀಡಿರುವ ಕಾರಣ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಮೈಸೂರು ಜಿಲ್ಲಾಧಿಕಾರಿ ಡಿ. ರಣದೀಪ್ ಅವರು ತಮ್ಮ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ನಗರದಲ್ಲಿ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಬೇಕು ಎಂದಿರುವ ಜಿಲ್ಲಾಧಿಕಾರಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಟಿ. ನರಸೀಪುರ, ನಂಜನಗೂಡು ತಾಲೂಕುಗಳಲ್ಲಿ ನೀರಾವರಿ ಪ್ರದೇಶ ಇರುವುದರಿಂದ ಅಲ್ಲಿನ ಸಾರ್ವಜನಿಕರು ಬಂದ್‍ನಲ್ಲಿ ಭಾಗವಹಿಸುವ ಸಾಧ್ಯತೆ ಹೆಚ್ಚು. ಅಲ್ಲಿ ಹೆಚ್ಚಿನ ನಿಗಾ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪರಿಸ್ಥಿತಿಯನ್ನು ಸಂಜೆಯವರೆಗೂ ಅವಲೋಕಿಸಿ ಶಾಲಾ-ಕಾಲೇಜುಗಳಿಗೆ ರಜೆ ನೀಡಬೇಕೋ ಬೇಡವೋ ಎನ್ನುವುದನ್ನು ತೀರ್ಮಾನಿಸಲಾಗುವುದು ಎಂದು ತಿಳಿಸಿದರು. ಬಂದ್ ನೆಪದಲ್ಲಿ ಸಾರ್ವಜನಿಕರಿಗೆ ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿಯುಂಟು ಮಾಡಬಾರದು. ಹಾಗೇನಾದರೂ ಮಾಡಿದಲ್ಲಿ ಅಂಥಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಹಿತಕರ ಘಟನೆಗಳು ನಡೆದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಗಳ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 0821-2423800 ಕರೆ ಮಾಡಿ ತಿಳಿಸಿ ಎಂದಿದ್ದಾರೆ.

ಡಿಸಿಪಿ ಶೇಖರ್ ಮಾತನಾಡಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಕನ್ನಡಪರ ಸಂಘಟನೆಗಳು ಹೆಚ್ಚು ಸಕ್ರಿಯವಾಗಿರುವ ಕಾರಣ ಅವುಗಳನ್ನು ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಆ ಸ್ಥಳಗಳಲ್ಲಿ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳಿಗೆ ಭದ್ರತೆ ಅವಶ್ಯಕತೆ ಇದ್ದರೆ ಅವರಿಗೂ ಭದ್ರತೆ ಒದಗಿಸಲಾಗುವುದು. ಕೇಂದ್ರ ಸರ್ಕಾರ, ರಾಜ್ಯಸರ್ಕಾರದ ಕಚೇರಿಗಳಿಗೆ ಸೂಕ್ತ ಭದ್ರತೆ ಕಲ್ಪಿಸಲಾಗುವುದು ಎಂದಿದ್ದಾರೆ.

ಪರಿಸ್ಥಿತಿಯನ್ನು ಅವಲೋಕಿಸಿ ಸಾರಿಗೆ ಬಸ್ ಸಂಚಾರದ ಕುರಿತು ನಿರ್ಧರಿಸಲಾಗುವುದು ಎಂದು ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಮೈಸೂರು ಉಪ ವಿಭಾಗಾಧಿಕಾರಿ ಸಿ.ಎಲ್. ಆನಂದ್, ಹುಣಸೂರು ಉಪವಿಭಾಗಾಧಿಕಾರಿ ಸೌಜನ್ಯ, ಮೂಡಾ ಆಯುಕ್ತ ಡಾ.ಎಂ. ಮಹೇಶ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply

comments

Related Articles

error: