
ಮೈಸೂರು
ಫೈನಾನ್ಸಿಯರ್ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು : ಸಾವಿಗೂ ಮುನ್ನ ಆಪ್ತರಿಗೆ ಕರೆ ಮಾಡಿ ಪ್ರಭಾವಿ ಶಾಸಕರ ಹೆಸರು ಹೇಳಿದ್ದ !
ಮೈಸೂರು,ಫೆ.17:- ಮೈಸೂರಿನಲ್ಲಿ ಫೈನಾನ್ಸಿಯರ್ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ದೊರೆತಿದೆ. ತನ್ನ ಆಪ್ತರಿಗೆ ಕರೆ ಮಾಡಿದ ಯತಿರಾಜ್ ತನ್ನ ನೋವಿಗೆ ಕಾರಣರಾದ ಪ್ರಭಾವಿ ಶಾಸಕರೋರ್ವರ ಹೆಸರನ್ನು ಬಾಯ್ಬಿಟ್ಟಿದ್ದಾರೆ.
ವಿಜಯನಗರದಲ್ಲಿ ಚೆಲುವನಾರಾಯಣಸ್ವಾಮಿ ಚಿಟ್ ಫಂಡ್ ನಡೆಸುತ್ತಿದ್ದ ಆನಂದೂರು ನಿವಾಸಿ ಯತಿರಾಜ್ ಸಾಲ ವಾಪಸ್ ಕೇಳಿದ್ದಕ್ಕೆ ರಾಜಕಾರಣಿಯಿಂದ ಕೊಲೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮನನೊಂದು ಫೆ.5ರಂದು ನೇಣಿಗೆ ಶರಣಾಗಿದ್ದರು. ಈ ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಫೈನಾನ್ಶಿಯರ್ ಯತಿರಾಜ್ ಸಾಯುವ ಮುನ್ನ ಆಪ್ತರೊಂದಿಗೆ ಫೋನ್ ಮಾಡಿ ನೋವು ಹಂಚಿಕೊಂಡಿದ್ದ ಎನ್ನಲಾಗಿದೆ. ಹಣದ ವಿಚಾರದಲ್ಲಿ ತೀವ್ರವಾಗಿ ನೊಂದಿದ್ದ ಫೈನಾನ್ಶಿಯರ್ ಆತ್ಮೀಯರೊಂದಿಗೆ ಸಾಲ ಪಡೆದವರ ಹೆಸರು ಹೇಳಿದ್ದ. ನ.22 ರಂದು ನಡೆದ ಸಂಧಾನದಂತೆ ಹಣ ವಾಪಸ್ ಬಗ್ಗೆ ಡೇಟ್ ಫಿಕ್ಸ್ ಆಗಿತ್ತು ಎನ್ನಲಾಗಿದೆ. ಡಿ.22 ರಂದು ಹಾಗೂ ಫೆಬ್ರವರಿಯಲ್ಲಿ 2 ಕೋಟಿ 15 ಲಕ್ಷ ಕೊಡುವುದಾಗಿ ಭರವಸೆ ನೀಡಿದ್ದರು. ಹಣ ವಾಪಸ್ ಕೊಡುವುದಾಗಿ ಪ್ರಭಾವಿ ಶಾಸಕ ಭರವಸೆ ನೀಡಿದ್ದರು. ಕೊನೆಗೆ ಹಣ ನೀಡದೇ ಶಾಸಕ ಕೈ ಕೊಟ್ಟಿದ್ದಾರೆ. ಆಡಿಯೋದಲ್ಲಿ ಪ್ರಭಾವಿ ಶಾಸಕನ ಹೆಸರು ಪ್ರಸ್ತಾಪವಾಗಿದ್ದು, ಶಾಸಕನ ಜೊತೆ ಸೇರಿ ಕೆಲವರು ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ.ನನ್ನ ಮುಗಿಸೋದಕ್ಕೆ ಪ್ಲಾನ್ ಮಾಡುತ್ತಿದ್ದಾರೆ ಎಂದು ಯತಿರಾಜ್ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ನನಗೇನಾದರೂ ಆದರೆ ಅವರನ್ನು ಸುಮ್ಮನೇ ಬಿಡಬೇಡಿ ಎಂದು ತನ್ನ ಆಪ್ತರೊಂದಿಗೆ ಕೇಳಿಕೊಂಡಿದ್ದಾರೆ ಎನ್ನಲಾಗಿದ್ದು, ಪ್ರಭಾವಿ ಶಾಸಕನ ಮಧ್ಯಸ್ಥಿಕೆಯಿಂದ ಯತಿರಾಜು ಪ್ರಾಣಬಿಟ್ಟಿದ್ದಾರಾ ಎಂಬ ಪ್ರಶ್ನೆ ಅವರ ಆಪ್ತ ವಲಯದಲ್ಲಿ ಕೇಳಿ ಬಂದಿದೆ. (ಕೆ.ಎಸ್,ಎಸ್.ಎಚ್)