ಪ್ರಮುಖ ಸುದ್ದಿಮೈಸೂರು

ವಿಧಾನಸಭೆ ಚುನಾವಣೆಗಳಿಗೆ ಮೈಲಾಕ್ ನಿಂದ ಫಿಯಲ್ಸ್, ಪ್ಯಾಕೆಟ್ ಸೀಲಿಂಗ್ ವ್ಯಾಕ್ಸ್: ಎಚ್.ಎ.ವೆಂಕಟೇಶ್

ಮೈಸೂರು,ಫೆ.17-ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗಳಿಗೆ 1,32,000 ಫಿಯಲ್ಸ್ ಗಳಿಗೆ (10 ಎಂಎಲ್ ಅಳತೆಯ), ಜತೆಗೆ ಒಟ್ಟು 20,000 ಪ್ಯಾಕೆಟ್ ಸೀಲಿಂಗ್ ವ್ಯಾಕ್ಸ್ ಗೂ ಮುಖ್ಯ ಚುನಾವಣಾಧಿಕಾರಿ ಕಾರ್ಯಾಲಯ ಬೇಡಿಕೆಯನ್ನು ಸಲ್ಲಿಸಿದೆ. ಇದರ ಒಟ್ಟಾರೆ ವಹಿವಾಟು 2.06 ಕೋಟಿ ರೂ. ಆಗಲಿದೆ ಎಂದು ಮೈಲಾಕ್ ಅಧ್ಯಕ್ಷ ಎಚ್.ಎ.ವೆಂಕಟೇಶ್ ತಿಳಿಸಿದರು.

ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಸಂಸ್ಥೆಯು 2017-18ನೇ ಹಣಕಾಸು ವರ್ಷದಲ್ಲಿ ಸಾಧಿಸಿರುವ ಪ್ರಗತಿ ಮತ್ತು ಚುನಾವಣೆಯಲ್ಲಿ ಕಂಪನಿಯು ವಹಿಸಿರುವ ಪಾತ್ರದ ಬಗ್ಗೆ ಶನಿವಾರ ಮೈಲಾಕ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

ಮಲೇಷಿಯಾ ದೇಶದ ಪಾರ್ಲಿಮೆಂಟ್ ಚುನಾವಣೆಗೆ 60 ಎಂಎಲ್ ಅಳತೆಯ 1,00,000 ಬಾಟಲ್ ಗಳ ವಿದೇಶಿ ವಹಿವಾಟು ಸದ್ಯದಲ್ಲೇ ಬರುವ ಸಾಧ‍್ಯತೆ ಇದ್ದು, ಇದರ ಸಂಭವನೀಯ ವಹಿವಾಟು 8 ಕೋಟಿ ರೂ. ಆಗಲಿದೆ. 2017-18ನೇ ಸಾಲಿನಲ್ಲಿ ರಾಜ್ಯ ಚುನಾವಣಾ ಆಯೋಗ ಕರ್ನಾಟಕ ಹಾಗೂ ಸಹಕಾರ ಸಂಘಗಳ ಚುನಾವಣೆಗೆ ಒಟ್ಟು 794 ಇಂಡೆಲಿಬಲ್ ಇಂಕ್ ಮಾರ್ಕರ್ ಪೆನ್ ಗಳನ್ನು ಸರಬರಾಜು ಮಾಡಿದೆ ಎಂದರು.

2017-18ನೇ ಸಾಲಿನಲ್ಲಿ ಪೇಯಿಂಟ್ ಕ್ಷೇತ್ರದಲ್ಲಿ 12 ಕೋಟಿ ರೂ. ಪರಿಷ್ಕೃತ ಗುರಿ ಹೊಂದಿದ್ದು, 2018ರ ಜನವರಿ ಅಂತ್ಯಕ್ಕೆ 8.80 ಕೋಟಿ ವಹಿವಾಟು ನಡೆಸಲಾಗಿದೆ. ಅದೇ ರೀತಿ ಅಳಿಸಲಾಗದ ಶಾಯಿ ಕ್ಷೇತ್ರದಲ್ಲಿ 2017-18ನೇ ಸಾಲಿಗೆ 12 ಕೋಟಿ ರೂ. ಪರಿಷ್ಕೃತ ಗುರಿ ಹೊಂದಲಾಗಿದ್ದು, 2018ರ ಜನವರಿ ಅಂತ್ಯಕ್ಕೆ 10.69 ಕೋಟಿ ರೂ. ವಹಿವಾಟು ನಡೆಸಲಾಗಿದೆ ಎಂದು ವಿವರ ನೀಡಿದರು.

2017-18ನೇ ಸಾಲಿನಲ್ಲಿ ಶೇ.81.20 ಸಾಧನೆ ಮಾಡಿದೆ. 10.69 ಕೋಟಿ ರೂ. ವಹಿವಾಟಿನ ಪೈಕಿ 5 ಕೋಟಿ ರೂ. ವಿದೇಶಿ ವಹಿವಾಟು ಸೇರಿರುತ್ತದೆ. 2017-18ನೇ ಸಾಲಿನಲ್ಲಿ ಕಾಂಬೋಡಿಯ, ಮಂಗೋಲಿಯ, ಪಾಪುವ-ನ್ಯೂ-ಗಿನಿಯ ಮತ್ತು ಮಲೇಷಿಯಾ ದೇಶಗಳಿಗೆ ರಫ್ತು ವಹಿವಾಟು ನಡೆಸಲಾಗಿದೆ. ದೇಶೀಯವಾಗಿ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ 5.69 ಕೋಟಿ ರೂ. ಮೊತ್ತದ ಅಳಿಸಲಾಗದ ಶಾಯಿ ವಹಿವಾಟು ಜರುಗಿರುತ್ತದೆ. ಇತ್ತೀಚೆಗೆ ಜರುಗಿದ ಗುಜರಾತ್ ವಿಧಾನಸಭೆ ಚುನಾವಣೆ ಸೇರಿದಂತೆ ಮುಂದೆ ಜರುಗಲಿರುವ ನಾಗಲ್ಯಾಂಡ್, ಮೇಘಾಲಯ, ತ್ರಿಪುರಾ ರಾಜ್ಯಗಳ ವಿಧಾನಸಭೆ ಚುನಾವಣೆಗಳಿಗೆ ಅಳಿಸಲಾಗದ ಶಾಯಿ ಸರಬರಾಜು ಮಾಡಲಾಗಿದೆ ಎಂದು ಹೇಳಿದರು.

2017ರ ಜುಲೈನಲ್ಲಿ ಜರುಗಿದ ಭಾರತದ ರಾಷ್ಟ್ರಪತಿಗಳ ಚುನಾವಣೆಗೆ ಪ್ರಥಮ ಬಾರಿಗೆ 1000 ವಿಶೇಷ ಬ್ಯಾಲೆಟ್ ಮಾರ್ಕಿಂಗ್ ಪೆನ್ ಗಳನ್ನು ಸರಬರಾಜು ಮಾಡಿರುವ ಹೆಗ್ಗಳಿಕೆ ಮೈಲಾಕ್ ಗೆ ಸಂದಿದೆ. 2017-18ನೇ ಸಾಲಿನಲ್ಲಿ ಆಂಧ್ರಪ್ರದೇಶ, ಗೋವಾ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳ ವಿಧಾನಪರಿಷತ್ ಚುನಾವಣೆಗಳಿಗೆ 389 ಬ್ಯಾಲೆಟ್ ಮಾರ್ಕಿಂಗ್ ಪೆನ್ ಗಳನ್ನು ಸರಬರಾಜು ಮಾಡಲಾಗಿದೆ. 2016-17ನೇ ಸಾಲಿನ ಲಾಭಾಂಶ 23.68 ಲಕ್ಷ ರೂ. ಅನ್ನು ಡಿವಿಡೆಂಟ್ ರೂಪದಲ್ಲಿ ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ವ್ಯವಸ್ಥಾಪಕ ಸಿ.ಎ.ಹರಕುಮಾರ್, ವ್ಯವಸ್ಥಾಪಕ ನಿರ್ದೇಶ ಡಾ.ಚಂದ್ರಶೇಖರ ದೊಡ್ಡಮನಿ ಹಾಜರಿದ್ದರು. (ವರದಿ-ಎಚ್.ಎನ್, ಎಂ.ಎನ್)

 

Leave a Reply

comments

Related Articles

error: