ದೇಶಪ್ರಮುಖ ಸುದ್ದಿ

ಫೆ.21ಕ್ಕೆ ಕಮಲ್ ಹಾಸನ್ ಹೊಸ ಪಕ್ಷ ಘೋಷಣೆ; ರಜನಿಕಾಂತ್ ಭೇಟಿಯಾದ ಕಮಲ್

ಚೆನ್ನೈ,ಫೆ.19-ಖ್ಯಾತ ನಟ ಕಮಲ್ ಹಾಸನ್ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧಗೊಂಡಿದ್ದು, ಫೆ.21 ರಂದು ಕಮಲ್ ತಮ್ಮ ನೂತನ ಪಕ್ಷದ ಹೆಸರು, ಚಿಹ್ನೆ ಘೋಷಿಸಲಿದ್ದಾರೆ. ಇದಕ್ಕೂ ಮುನ್ನ ಕಮಲ್ ರಜನಿಕಾಂತ್ ಅವರನ್ನು ಭೇಟಿಯಾಗಿದ್ದಾರೆ.

ರಜನಿ ಅವರ ನಿವಾಸಕ್ಕೆ ಭೇಟಿ ನೀಡಿದ ಕಮಲ್, ರಜನಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಸೌಜನ್ಯದ ಭೇಟಿಯಷ್ಟೇ ಎಂದು ಊಹಾಪೋಹಗಳಿಗೆ ತೆರೆ ಎಳೆಯುವ ಯತ್ನ ಮಾಡಿದರು.

ಇದು ರಾಜಕೀಯ ಭೇಟಿ ಆಗಿರಲಿಲ್ಲ. ನಾನು ರಾಜಕೀಯ ಪ್ರವೇಶಿಸುವ ನನ್ನ ನಿರ್ಧಾರವನ್ನು ತಿಳಿಸಿದೆ. ನಾನು ರಾಜಕೀಯ ಪಯಣ ಆರಂಭಿಸುವ ಮುನ್ನ ಅನೇಕರನ್ನು ಭೇಟಿಯಾಗುತ್ತಿದ್ದೇನೆ. ಗೆಳೆತನದ ಭಾಗವೇ ಈ ಭೇಟಿ. ರಾಜಕೀಯವಲ್ಲ ಎಂದು ಕಮಲ್ ಸ್ಪಷ್ಟಪಡಿಸಿದರು.

ರಜನಿಕಾಂತ್ ಮಾತನಾಡಿ, ಕಮಲ್ ಹಾಸನ್ ತಮಿಳುನಾಡಿನ ಜನರ ಸೇವೆ ಮಾಡಲು ಬಯಸಿದ್ದಾರೆ. ಅವರಿಗೆ ಯಶಸ್ಸು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ಅವರು ಹೆಸರು-ಹಣ ಗಳಿಸಲು ರಾಜಕೀಯ ಪ್ರವೇಶಿಸಿಲ್ಲ. ಜನಸೇವೆ ದೃಷ್ಟಿಯಿಂದ ಆಗಮಿಸಿದ್ದಾರೆ. ಸಿನಿಮಾಗಳಲ್ಲೂ ನನ್ನ ಮತ್ತು ಅವರ ಪಾತ್ರಗಳೇ ಬೇರೆ ಎಂದೂ ರಜನಿ ಮಾರ್ಮಿಕವಾಗಿ ನುಡಿದರು.

ಫೆ.21 ರಂದು ರಾಮೇಶ್ವರಂನಲ್ಲಿರುವ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಸ್ಮಾರಕಕ್ಕೆ ಗೌರವ ಸಲ್ಲಿಸಿದ ಬಳಿಕ ಮಧುರೈವರೆಗೆ ರ್ಯಾಲಿ ನಡೆಸಲಿರುವ ಕಮಲ್, ಅಲ್ಲಿ ಹೊಸ ಪಕ್ಷದ ಹೆಸರು ಹಾಗೂ ಚಿಹ್ನೆ ಪ್ರಕಟಿಸಲಿದ್ದಾರೆ. ಜೊತೆಗೆ ಅಲ್ಲಿಂದಲೇ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ. (ವರದಿ-ಎಂ.ಎನ್)

Leave a Reply

comments

Related Articles

error: