ದೇಶಪ್ರಮುಖ ಸುದ್ದಿ

ಉಗ್ರರ ದಾಳಿ: ಎನ್ಸಿಪಿ ಅಭ್ಯರ್ಥಿ ಜೋನಾಥನ್ ನೆಂಗ್ಮಿನ್ಸಾ ಸಂಗ್ಮಾ, ಇಬ್ಬರು ಭದ್ರತಾ ಸಿಬ್ಬಂದಿಯ ಹತ್ಯೆ

ಗುವಾಹಟಿ,ಫೆ.19-ಪ್ರಚಾರ ಕಾರ್ಯ ಮುಗಿಸಿ ಬರುತ್ತಿದ್ದ ಮೇಘಾಲಯದ ಗೆರೋ ಹಿಲ್ಸ್ ಜಿಲ್ಲೆ ವಿಲಿಯಂನಗರ ವಿಧಾನಸಭಾ ಕ್ಷೇತ್ರದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ಸಿಪಿ) ಅಭ್ಯರ್ಥಿ ಜೋನಾಥನ್ ನೆಂಗ್ಮಿನ್ಸಾ ಸಂಗ್ಮಾ (43) ಹಾಗೂ ಅವರ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಉಗ್ರರು ಭಾನುವಾರ ರಾತ್ರಿ ಹತ್ಯೆ ಮಾಡಿದ್ದಾರೆ.

ಶಿಲ್ಲಾಂಗ್ನಿಂದ 245 ಕಿಲೋಮೀಟರ್ ದೂರದ ಸಮಂದಾ ಎಂಬ ಹಳ್ಳಿಯಲ್ಲಿ ಘಟನೆ ನಡೆದಿದೆ. ಐಇಡಿ ಸ್ಫೋಟದ ಬಗ್ಗೆ ನಮಗೆ ಮಾಹಿತಿ ಬಂದಿದೆ. ಇದರಲ್ಲಿ ಕೆಲವರು ಹತ್ಯೆಯಾಗಿದ್ದಾರೆ ಎಂದು ಮೇಘಾಲಯ ಪೊಲೀಸ್ ಮಹಾನಿರ್ದೇಶಕ ಎಸ್.ಬಿ.ಸಿಂಗ್ ಹೇಳಿದ್ದಾರೆ.

ಉಗ್ರರ ದಾಳಿ ನಡೆದಾಗ ವಾಹನದಲ್ಲಿ ಏಳು ಮಂದಿ ಇದ್ದರು ಎಂಬ ವರದಿ ಇದೆ. ಪ್ರದೇಶದಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದ ಕಾರಣ, ನಿಖರವಾದ ಮಾಹಿತಿ ಇಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಎಫ್.ಆರ್.ಖಾರ್ಕೋನ್ಗರ್ ಹೇಳಿದ್ದಾರೆ.

ಪ್ರತ್ಯೇಕ ಗೆರೋಲ್ಯಾಂಡ್ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿರುವ ಗೆರೊ ನ್ಯಾಷನಲ್ ಲಿಬರೇಷನ್ ಆರ್ಮಿ ಎಂಬ ಉಗ್ರಗಾಮಿ ಸಂಘಟನೆ, ಸಂಗ್ಮಾ ಅವರಿಗೆ ಮತ ಹಾಕಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಭಿತ್ತಿಪತ್ರಗಳನ್ನು ವಿಲಿಯಂ ನಗರದಲ್ಲಿ ಹಂಚಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದೇ ಕ್ಷೇತ್ರದಿಂದ 2013ರ ವಿಧಾನಸಭಾ ಚುನಾವಣೆಯಲ್ಲಿ ಸಂಗ್ಮಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಿಕ್ಷಣ ಸಚಿವೆ ದೆಬೊರಹ್ ಸಿ.ಮರಕ್ ಸೇರಿದಂತೆ ಎಂಟು ಮಂದಿ ಕಣದಲ್ಲಿದ್ದಾರೆ. ರಾಜ್ಯ ವಿಧಾನಸಭೆಗೆ ಫೆ.27ರಂದು ಚುನಾವಣೆ ನಡೆಯಲಿದೆ.

ಕಳೆದ ಚುನಾವಣೆಯಲ್ಲಿ ದೆಬೊರಹ್ ವಿರುದ್ಧ ಸೋಲು ಅನುಭವಿಸಿದ್ದ ಜೋನಾಥನ್, ವಿಜೇತ ಅಭ್ಯರ್ಥಿ ವಿರುದ್ಧ ದೂರು ಸಲ್ಲಿಸಿ, ಚುನಾವಣೆ ಗೆಲ್ಲಲು ಹಾಗೂ ಮತದಾರರ ಮೇಲೆ ಪ್ರಭಾವ ಬೀರಲು ಉಗ್ರರ ನೆರವು ಪಡೆದಿದ್ದಾರೆ ಎಂದು ಆಪಾದಿಸಿದ್ದರು. ಕಳೆದ ಚುನಾವಣೆಯಲ್ಲಿ ದೆಬೊರಹ್ 8,402 ಮತಗಳನ್ನು ಪಡೆದರೆ, ಜೋನಾಥನ್ 5,525 ಮತ ಗಳಿಸಿದ್ದರು. (ವರದಿ-ಎಂ.ಎನ್)

Leave a Reply

comments

Related Articles

error: