ಪ್ರಮುಖ ಸುದ್ದಿಮೈಸೂರು

ಬೆಂಗಳೂರು ಮತ್ತು ಮೈಸೂರು ನಡುವೆ ರೈಲು ಮಾರ್ಗದ ವಿದ್ಯುದ್ದೀಕರಣವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ

ಮೈಸೂರು,ಫೆ.19:- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ  ಕೆ.ಎಸ್.ಆರ್. ಬೆಂಗಳೂರು ಮತ್ತು ಮೈಸೂರು ನಡುವೆ ರೈಲು ಮಾರ್ಗದ ವಿದ್ಯುದ್ದೀಕರಣವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇದೇ ವೇಳೆ ಮೈಸೂರು ಮತ್ತು ರಾಜಸ್ಥಾನದ ಉದಯಪುರ ನಡುವೆ ಸಂಚರಿಸುವ ಪ್ಯಾಲೇಸ್ ಕ್ವೀನ್ ಹಮ್ ಸಫರ್ ಎಕ್ಸ್ ಪ್ರೆಸ್ ರೈಲು ಸೇವೆಗೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಸಚಿವ ಆರ್.ವಿ.ದೇಶಪಾಂಡೆ ಬೆಂಗಳೂರು ಮತ್ತು ಮೈಸೂರು ನಡುವಿನ 138ಕಿ.ಮೀ ಉದ್ದದ ಜೋಡಿ ರೈಲ್ವೆ ನಿರ್ಮಾಣ ಮತ್ತು ವಿದ್ಯುದ್ದೀಕರಣ ರಾಜ್ಯ ಸರ್ಕಾರ ನೇತೃತ್ವದ ಮಹತ್ವದ ಸಾಧನೆಯಾಗಿದೆ ಎಂದರು. ಈ ಎರಡೂ ಯೋಜನೆಗಳನ್ನು ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯೊಂದಿಗೆ ವೆಚ್ಚ ಹಂಚಿಕೆ ಆಧಾರದಲ್ಲಿ ಕೈಗೊಂಡಿದ್ದು, ಯೋಜನೆಯ ಒಟ್ಟು ಮೊತ್ತ 999ಕೋ.ರೂಗಳಲ್ಲಿ ರಾಜ್ಯ ಸರ್ಕಾರದ ಪಾಲು 581ಕೋ.ರೂ.ಗಳಾಗಿದೆ. ಈ ಮಾರ್ಗದ ಜೋಡಿ ಹಳಿ ನಿರ್ಮಾಣ ಯೋಜನೆಯು ಮೂರು ಹಂತಗಳಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಪೂರ್ಣಗೊಂಡಿದೆ. ವಿದ್ಯುದ್ದೀಕರಣ ಯೋಜನೆಯನ್ನು 2010-11ರಲ್ಲಿ ಆರಂಭಿಸಿ ಈಗ ಪೂರ್ಣಗೊಳಿಸಲಾಗಿದೆ. ಆದರೆ ಮಧ್ಯದಲ್ಲಿ ಶ್ರೀರಂಗಪಟ್ಟಣ ಬಳಿ ಕಾವೇರಿ ನದಿಗೆ ಅಡ್ಡಲಾಗಿ 2ಸೇತುವೆಗಳನ್ನು ಕಟ್ಟಬೇಕಾದ್ದರಿಂದ ಮತ್ತು ಟಿಪ್ಪು ಶಸ್ತ್ರಾಗಾರವನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಶ್ರೀರಂಗಪಟ್ಟಣದ ಬಳಿ ಇದ್ದ ಸುಮಾರು 225 ವರ್ಷಗಳಷ್ಟು ಪುರಾತನವಾದ ಮತ್ತು ಚಾರಿತ್ರಿಕ ಸ್ಮಾರಕ ಟಿಪ್ಪು ಶಸ್ತ್ರಾಗಾರವು 900ಟನ್ ಭಾರವಿತ್ತು.ಇದಕ್ಕೆ ಸ್ವಲ್ಪವೂ ಧಕ್ಕೆ ಆಗದಂತೆ ಸಂಪೂರ್ಣ ಸುರಕ್ಷಿತವಾಗಿ ಸ್ಥಳಾಂತರಿಸಿದ್ದು, ಒಂದು ಮಹತ್ವದ ಸಾಧನೆಯಾಗಿದೆ ಎಂದರು.

ಕಳೆದ 2 -3ವರ್ಷಗಳಿಂದ ರಾಜ್ಯ ಸರ್ಕಾರವು ಈ ಕಾಮಗಾರಿಗೆ ವಿಶೇಷ ಒತ್ತನ್ನು ನೀಡಿ ಈ ಯೋಜನೆಯ ಅನುಷ್ಠಾನಕ್ಕೆ ವೇಗವನ್ನು ಒದಗಿಸಿತು. ಬೆಂಗಳೂರು-ಮೈಸೂರು ಮಾರ್ಗದ ಜೋಡಿ ರೈಲ್ವೆ ಹಳಿ ನಿರ್ಮಾಣ ಮತ್ತು ವಿದ್ಯುದ್ದೀಕರಣದಿಂದ ಈ ಎರಡೂ ನಗರಗಳ ನಡುವೆ ಪ್ರತಿನಿತ್ಯ ಓಡಾಡುವ ಸುಮಾರು 6ಸಾವಿರಕ್ಕಿಂತ ಹೆಚ್ಚಿನ ಮತ್ತು ಉಳಿದಂತೆ ಓಡಾಡುವ 25ಸಾವಿರಕ್ಕೂ ಹೆಚ್ಚು ಸಾಮಾನ್ಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಜೊತೆಗೆ ರೈಲ್ವೆ ಇಲಾಖೆಗೆ ವಾರ್ಷಿಕ 20ಕೋ.ರೂ ಉಳಿತಾಯವಾಗಲಿದೆ. ಅಲ್ಲದೇ ಎರಡೂ ನಗರಗಳ ನಡುವೆ ಹೆಚ್ಚಿನ ಸಂಖ್ಯೆಯ ರೈಲು ಓಡಾಟಕ್ಕೆ ಸುಗಮ ಸೌಲಭ್ಯ ಸಿಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭ ರಾಜ್ಯಪಾಲರಾದ ವಜುಭಾಯಿ ಆರ್. ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ಅನಂತಕುಮಾರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್. ಸಿ. ಮಹದೇವಪ್ಪ, ಸಂಸದರಾದ ಪ್ರತಾಪ್ ಸಿಂಹ, ಸಿ.ಎಸ್. ಪುಟ್ಟರಾಜು, ಕರ್ನಾಟಕದ ಮುಖ್ಯಕಾರ್ಯದರ್ಶಿ ರತ್ನಪ್ರಭ, ಮೈಸೂರು ಜಿಲ್ಲಾಧಿಕಾರಿ ರಂದೀಪ್ ಡಿ. ಮುಂತಾದ ಗಣ್ಯರು ಉಪಸ್ಥಿತರಿದ್ದರು.

14 ವರ್ಷಗಳ ಬಳಿಕ ಪ್ರಯಾಣಿಕರ ಕನಸು ಈಡೇರಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: