ಮೈಸೂರು

ವಿದ್ಯಾರ್ಥಿಗಳು ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಿ : ಜಿ.ಎಲ್ ತ್ರಿಪುರಾಂತಕ

ಮೈಸೂರು,ಫೆ.19:-  ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ಜ್ಞಾನಸಂಪನ್ಮೂಲ ಕೇಂದ್ರದ ವತಿಯಿಂದ ಸುತ್ತೂರಿನಲ್ಲಿ ಗ್ರಾಮೀಣ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮೂರು ದಿನದ ಪ್ರಾಯೋಗಿಕ ವಿಜ್ಞಾನ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಸೋಮವಾರ ಕಾರ್ಯಾಗಾರಕ್ಕೆ ಚಾಲನೆ ನೀಡಿದ  ಜೆಎಸ್‍ಎಸ್ ಶಿಕ್ಷಣ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್ ತ್ರಿಪುರಾಂತಕ ಮಾತನಾಡಿ  ಇಂದು ನಾವು ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ವಾಸಿಸುತ್ತಿದ್ದೇವೆ. ವಿಜ್ಞಾನದ ಪ್ರಗತಿಯನ್ನು ತಂತ್ರಜ್ಞಾನದಲ್ಲಿ ಅಳವಡಿಸಿ ಹೆಚ್ಚು ಸಾಧನೆಯನ್ನು ಮಾಡುವ ಕಡೆಗೆ ವಿದ್ಯಾರ್ಥಿಗಳು ಕನಸು ಕಾಣಬೇಕು, ಎಂತಹ ಕನಸು ಎಂದರೆ ಡಾ.ಎ.ಪಿ.ಜೆ ಅಬ್ದುಲ್‍ಕಲಂ  ಹೇಳಿದಂತೆ “ನಿದ್ರೆ ನೀಡದಂತಹ ಕನಸನ್ನು ಕಾಣಬೇಕು” ಆಗ ಮಾತ್ರ ವಿದ್ಯಾರ್ಥಿಗಳು ಪ್ರಶ್ನಿಸುವ ಆಲೋಚಿಸುವ ಗುಣಗಳನ್ನು ಗಳಿಸಿಕೊಳ್ಳಬಹುದು. ಇದರಿಂದ ಹೊಸ ಹೊಸ ಆಲೋಚನೆಗಳು ಹೊರಹೊಮ್ಮಿ ಏಕೆ? ಹೇಗೆ? ಏನು? ಎನ್ನುತ್ತ ಸಾಗಿ ವಿದ್ಯಾರ್ಥಿಗಳಾದ ನೀವು ಸಂಶೋಧನ ಪ್ರವೃತ್ತಿ ಬೆಳೆಸಿಕೊಳ್ಳಬಹುದು. ಇಂತಹ ಕಾರ್ಯಾಗಾರದ ಪ್ರಯೋಜನವನ್ನು ತಾವು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೆಎಸ್‍ಎಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಜಿ.ಎಸ್. ಶಿವಮಲ್ಲು ಮಾತನಾಡಿ  ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಭಾವದಿಂದ ಇಂದು ನಾವು ನಮ್ಮ ಕೈಯಲ್ಲೇ ಪ್ರಪಂಚವನ್ನು ಕಾಣುವ ಅವಕಾಶವಿದೆ. ಆ ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ ಎಂದು ತಿಳಿಸಿದರು. ತಮ್ಮ ಬಾಲ್ಯದಲ್ಲಿ ಪಾಕೇಟ್ ರೇಡಿಯೋ ಹಾಡು ಮತ್ತು ಮಾತನಾಡುವುದನ್ನು ನೋಡಿ ಇದು ಹೇಗೆ ಸಾಧ್ಯ ಎಂದು ಆಶ್ಚರ್ಯಚಿಕಿತರಾಗಿದ್ದೆವು.  ಆದರೆ ಈಗ ಒಂದು ಪುಟ್ಟ ಮಗು ಸಹ ಮೊಬೈಲ್ ಬಳಸಿ ಸಂಪೂರ್ಣ ಮಾಹಿತಿಯನ್ನು ಗ್ರಹಿಸುವ ದಿಕ್ಕಿಗೆ ಹೋಗುತ್ತಿದೆ. ಮಗುವಿಗೆ ಮಾರ್ಗದರ್ಶನವಿದೆ ಆದರೆ ಬದುಕುವ ಮತ್ತು ಹೊಂದಾಣಿಕೆ ಮಾಡಿಕೊಳ್ಳುವ ಅವಕಾಶ ಕಡಿಮೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯರಾದ ಬಿ.ಎಂ. ಸಿದ್ದಪ್ಪ ವಿದ್ಯಾರ್ಥಿಗಳಿಗೆ ಶುಭ ಕೋರಿದರು.  ಕಾರ್ಯಕ್ರಮದ ಯೋಜನಾಧಿಕಾರಿ ಎಂ. ಭವಾನಿಶಂಕರ್ ಕಾರ್ಯಕ್ರಮದ ರೂಪುರೇಷೆಗಳನ್ನು ತಿಳಿಸಿದರು.  ಸಂಪನ್ಮೂಲ ವ್ಯಕ್ತಿಗಳಾದ Kidvento Education & Research  ಸಂಸ್ಥೆಯ ನಿಖಿಲ್ ಭಾಸ್ಕರ್, ಅಭಿಲಾಷ್ ಮತ್ತು ಸಚಿನ್ ಹಾಗೂ ಕೇಂದ್ರದ ಸತೀಶ್, ಮಹೇಂದರ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. (ಎಸ್.ಎಚ್)

Leave a Reply

comments

Related Articles

error: