ಮೈಸೂರು

ಯುವಜನತೆ ಭ್ರಷ್ಟಾಚಾರ ನಿರ್ಮೂಲನೆಗೆ ಪಣತೊಡಿ: ಸಂತೋಷ್ ಹೆಗ್ಡೆ ಸಲಹೆ

ಭ್ರಷ್ಟಾಚಾರ ಇಂದು  ಎಲ್ಲಾ ಕ್ಷೇತ್ರಗಳಲ್ಲೂ ಬೇರೂರುತ್ತಿದೆ. ರಾಜಕೀಯ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಭ್ರಷ್ಟಾಚಾರದಿಂದ ದೇಶದ ಪ್ರಗತಿ ಅಸಾಧ್ಯವಾಗಿದ್ದು ಯುವಜನತೆ ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಭ್ರಷ್ಟಾಚಾರ ಮತ್ತಷ್ಟು ಆಳವಾಗಿ ಬೇರೂರಿ ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ  ಹೇಳಿದರು.

ಮೈಸೂರಿನ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಬುಧವಾರ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಮತ್ತು ಕುವೆಂಪು ಅಧ್ಯಯನ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ಕುವೆಂಪು ಅವರ ಸಮಗ್ರ ಅನುವಾದಗಳು ಪುಸ್ತಕ ಹಾಗೂ ಕುವೆಂಪು ಮಲೆನಾಡು ಪುಸ್ತಕಗಳನ್ನು ಸಂತೋಷ್ ಹೆಗ್ಡೆ ಲೋಕಾರ್ಪಣೆಗೊಳಿಸಿದರು. ಬಳಿಕ  ಮಾತನಾಡಿದ ಅವರು, ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಎಲ್ಲವೂ  ಭ್ರಷ್ಟವಾಗಿವೆ. ಇದರಿಂದ ವಿಶ್ವಮಟ್ಟದಲ್ಲಿ ಭಾರತದ ಅಭಿವೃದ್ಧಿ ಕುಂಠಿತವಾಗಲಿದೆ. ಯುವಜನತೆ ಭವ್ಯ ಭಾರತ ನಿರ್ಮಾಣ ಮಾಡಬಲ್ಲವರಾಗಿದ್ದು,  ಭ್ರಷ್ಟಾಚಾರ ನಿರ್ಮೂಲನೆಗೆ ಪಣತೊಡುವುದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಆಧುನಿಕ ಯುಗ ತಂತ್ರಜ್ಞಾನ ಯುಗವಾಗಿದೆ. ಕ್ಷಣಾರ್ಧದಲ್ಲಿ ವಿಶ್ವದ ಯಾವುದೇ ಮಾಹಿತಿಯನ್ನು ಅಂತರ್ಜಾಲದಲ್ಲಿ ಪಡೆಯಬಹುದಾಗಿದೆ. ಇಂದಿನ ದಿನಕ್ಕೆ ತಕ್ಕಂತೆ ಯುವಕರು ಹೆಚ್ಚಿನ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಅಂತರ್ಜಾಲದಲ್ಲಿ ಸಿಗುವ ಒಳ್ಳೆಯ ಅಂಶಗಳನ್ನು ಪಡೆದುಕೊಂಡು ಜೀವನ ರೂಪಿಸಿಕೊಳ್ಳುವಲ್ಲಿ ಮುಂದಾಗಬೇಕು.  ಕೇವಲ ತಂತ್ರಜ್ಞಾನ, ಶಿಕ್ಷಣಕ್ಕೆ  ಮಾತ್ರ ಸೀಮಿತವಾಗಿರದೆ ಮಾನವೀಯ ನೆಲೆಗಟ್ಟಿನಲ್ಲಿ ಬದುಕಬೇಕು. ಇತ್ತೀಚಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ.  ಮನುಷ್ಯರ ನಡುವಿನ ಸಂಬಂಧಗಳು ಕ್ಷೀಣಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಶ್ವಕ್ಕೆ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಕವಿ ಮಾತ್ರವಲ್ಲ. ಅವರೊಬ್ಬ  ಮಹಾನ್ ವ್ಯಕ್ತಿ. ತಮ್ಮ ಸಾಹಿತ್ಯದ ಮೂಲಕ ಹಲವಾರು ಕೃತಿಗಳನ್ನು ರಚಿಸಿ ಸಮಾಜ ಸುಧಾರಣೆಗೆ ತನ್ನದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಅಂತಹ ಮಹನೀಯರ ಆಶಯಗಳು ನಮ್ಮ ಜೀವನದ ಸುಧಾರಣೆಗೆ ದಾರಿ ದೀಪವಾಗಿದ್ದು ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ಮೈಸೂರು ವಿವಿ ಕುಲಪತಿ  ಪ್ರೊ.ಕೆ.ಎಸ್.ರಂಗಪ್ಪ, ಡಾ.ಚಂದ್ರಶೇಖರ್ ಎನ್ ಬೆಟ್ಟಹಳ್ಳಿ, ಸಾಹಿತಿ ಎನ್.ಎಸ್.ತಾರನಾಥ್, ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಸೇನಾನಿ, ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ನಾಡೋಜ ಹಂ.ಪ.ನಾಗರಾಜಯ್ಯ ಡಾ.ಪುಟ್ಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: